ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಆರಂಭವಾಗಿದೆ. ಈ ನಡುವೆ ಕೇಂದ್ರ ಸರ್ಕಾರವು ಈ ಅಧಿವೇಶನದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯ ಮಾಡುವ ಮಸೂದೆಯನ್ನು ಮಂಡನೆ ಮಾಡಲಾಗುವುದು ಎಂದು ಸುಪ್ರೀಂ ಕೊರ್ಟ್‌ಗೆ ಮಾಹಿತಿ ನೀಡಿದೆ.
ದೇಶದಲ್ಲಿ ಲೈಂಗಿಕ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯ ಮಾಡಿ 2010 ರಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಅರ್ಜಿಯನ್ನು ಸುಪ್ರಿಂ ಕೋರ್ಟ್ ಇಂದು ವಿಚಾರಣೆ ನಡೆಸಿದೆ. ಈ ಸಂದರ್ಭದಲ್ಲಿ, "ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಲೈಂಗಿಕ ಕಾರ್ಯಕರ್ತೆಯರ ಕಳ್ಳಸಾಗಣೆ ಮತ್ತು ಪುನರ್ವಸತಿಗೆ ಸಹಾಯ ಮಾಡುವ ಮಸೂದೆಯನ್ನು ಮಂಡನೆ ಮಾಡಲಾಗುತ್ತದೆ," ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ."ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ಗುರುತಿಸಿರುವ ಲೈಂಗಿಕ ಕಾರ್ಯಕರ್ತರ ಬಳಿಯಿಂದ ಯಾವುದೇ ಪಡಿತರ ಚೀಟಿ ಅಥವಾ ಇತರ ಯಾವುದೇ ಗುರುತಿನ ಪುರಾವೆಗಳ ಬೇಕು ಎಂದು ಒತ್ತಡ ಹೇರಬಾರದು. ನ್ಯಾಯಾಲಯದ ಹಿಂದಿನ ಆದೇಶಗಳಿಗೆ ಅನುಗುಣವಾಗಿ ಈ ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಪಡಿತರವನ್ನು ಒದಗಿಸಬೇಕು," ಎಂದು ಈ ವೇಳೆಯೇ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಜಸ್ಟಿಸ್ ಎಲ್ ಎನ್ ರಾವ್ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ನ್ಯಾಯಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಎಸ್ ಸೂರಿ ನೀಡಿದ ಮಾಹಿತಿಯನ್ನು ದಾಖಲಿಸಿಕೊಂಡಿದ್ದು, ಲೈಂಗಿಕ ಕಾರ್ಯಕರ್ತೆಯರ ಕಳ್ಳಸಾಗಣೆ ಮತ್ತು ಪುನರ್ವಸತಿಯನ್ನು ತಡೆಯಲು ಕೇಂದ್ರವು ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾನೂನನ್ನು ತರಲು ಯೋಜಿಸಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಆಹಾರ ಪಡೆಯುವ ಹಕ್ಕು ಮಾನವ ಹಕ್ಕು ಎಂದು ಒತ್ತಿ ಹೇಳಿದ ಸುಪ್ರೀಂ ಕೋರ್ಟ್ ಇನ್ನು ಈ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು, "ಆಹಾರ ಪಡೆಯುವ ಹಕ್ಕು ಮಾನವ ಹಕ್ಕು ಆಗಿದೆ. ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಆಹಾರದ ಹಕ್ಕನ್ನು ಮಾನವ ಹಕ್ಕು ಎಂದು ಗುರುತಿಸಲಾಗಿದೆ. ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕದ ಸಂದರ್ಭದಲ್ಲಿ ಉಂಟಾಗಿದ್ದ ಪರಿಸ್ಥಿತಿಯು ಈಗ ಕೊಂಚ ಸುಧಾರಣೆ ಆಗಿದ್ದರೂ ಕೂಡಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತನ್ನ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಪಡಿತರ ಪಡೆಯಲು ಅರ್ಹರಾಗಿರುವ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ಒದಗಿಸಲು ಸಂವಿಧಾನಿಕ ಬಾದ್ಯತೆಗಳು ಇದೆ ಎಂದು ನಾವು ಭಾವಿಸುತ್ತೇವೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲೇ "ಈ ದೇಶದಲ್ಲಿ ಲೈಂಗಿಕ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯ ಮಾಡಿ 2010 ರಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಸಲ್ಲಿಕೆ ಮಾಡಿದ್ದ ಅರ್ಜಿಗೆ ಸಂಬಂಧಿಸಿ, ಲೈಂಗಿಕ ಕಾರ್ಯಕರ್ತರ ಪುನರ್ವಸತಿಗಾಗಿ ತನ್ನ ಶಿಫಾರಸುಗಳನ್ನು ಸಲ್ಲಿಸಲು ನ್ಯಾಯಾಲಯವು 2011 ರಲ್ಲಿ ಸಮಿತಿಯನ್ನು ರಚಿಸಿದೆ ಮತ್ತು ಸಮಿತಿಯು ಶಿಫಾರಸುಗಳೊಂದಿಗೆ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ," ಎಂಬುವುದನ್ನು ಸುಪ್ರೀಂ ಕೋರ್ಟ್‌ನ ಪೀಠವು ಗಮನಿಸಿದೆ. ಫೆಬ್ರವರಿ 27 ರಂದು ಹೆಚ್ಚುವರಿ ಸಾಲಿಸಿಟರ್ ಜನರಲ್, "ಈ ವಿಷಯವನ್ನು ಕೇಂದ್ರ ಸಚಿವರ ಗುಂಪು ಪರಿಶೀಲನೆ ನಡೆಸುತ್ತಿದೆ ಹಾಗೂ ನ್ಯಾಯಾಲಯವು ನೇಮಿಸಿದ ಸಮಿತಿಯ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳುವ ಎರಡು ಕರಡು ಶಾಸನವನ್ನು ಪರಿಶೀಲಿಸುತ್ತಿದೆ ಎಂದು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಲಾಗಿದೆ," ಎಂದು ತಿಳಿಸಿದ್ದಾರೆ. ಈ ಅರ್ಜಿಯು 2010 ರಿಂದ ಬಾಕಿ ಉಳಿದಿದೆ. ಕಾನೂನಿನ ಅಗತ್ಯವನ್ನು ಅರಿತುಕೊಂಡ ನ್ಯಾಯಾಲಯವು ಆದಷ್ಟು ಬೇಗ ಕಾನೂನನ್ನು ಜಾರಿಗೆ ತರಲು ಸರ್ಕಾರವನ್ನು ಮನವಿ ಮಾಡಿದೆ ಎಂದು ಪೀಠ ಹೇಳಿದೆ.