ಮುಳ್ಳೇರಿಯ: ಆದೂರು ಸಮೀಪದ ಆಲಂತಡ್ಕಕ್ಕೆ ಭಾನುವಾರ ಹಾಗೂ ಸೋಮವಾರ ರಾತ್ರಿ 7 ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು ವ್ಯಾಪಕ ಕೃಷಿನಾಶವಾಗಿದೆ.
ಆಲಂತಡ್ಕ ಪ್ರದೇಶದ ರವಿರಾಜ ಕೇಕುಣ್ಣಾಯ, ಸತ್ಯನಾರಾಯಣ ಕೇಕುಣ್ಣಾಯ, ಮಾಧವ ಹೊಳ್ಳ ಮೊದಲಾದವರಿಗೆ ಸೇರಿದ ತೋಟಗಳಲ್ಲಿ ಆನೆಗಳು ಬಾಳೆ, ಕಂಗು, ತೆಂಗು ಮೊದಲಾದ ಕೃಷಿಯನ್ನು ನಾಶ ಮಾಡಿವೆ. ಕಬ್ಬಿಣದ ಗೇಟನ್ನು ನಾಶ ಮಾಡಿವೆ. ಆವರಣ ಗೋಡೆಯನ್ನು ಕೆಡವಿ ಹಾಕಿವೆ. ಒಂದೆಡೆಯಲ್ಲಿ ನಾಲ್ಕು ಆನೆಗಳು, ಇನ್ನೊಂದೆಡೆಯಲ್ಲಿ ಮೂರು ಆನೆಗಳ ಹಿಂಡು ಕೃಷಿನಾಶ ಮಾಡಿವೆ ಎಂದು ವರದಿಯಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅಂದಾಜು ಮಾಡಲಾಗಿದೆ. ಈ ಪ್ರದೇಶಗಳಿಗೆ ಈ ಹಿಂದೆಯೂ ಎರಡು ಬಾರಿ ಆನೆಗಳು ನುಗ್ಗಿದ್ದವು. ಕಾರಡ್ಕ, ಮುಳಿಯಾರು, ದೇಲಂಪಾಡಿ ಪಂಚಾಯಿತಿಗಳಲ್ಲಿ ಸತತವಾಗಿ ಆನೆಗಳು ಕೃಷಿ ನಾಶ ಮಾಡುತ್ತಲೇ ಇವೆ. ಸೋಲಾರ್ ತೂಗು ಬೇಲಿ ನಿರ್ಮಾಣಕ್ಕಾಗಿ ಸರ್ವೆ ಕಾರ್ಯವು ಆರಂಭಗೊಂಡರೂ ಅದು ಯತಾರ್ಥವಾಗುವ ಮೊದಲೇ ಆನೆಗಳು ಜನರ ನಿದ್ದೆಗೆಡಿಸುತ್ತಲೇ ಇವೆ. ಈ ಪ್ರದೇಶದಿಂದ ಕರ್ನಾಟಕದ ಅರಣ್ಯಕ್ಕೆ ಅಟ್ಟಿದ ಆನೆಗಳು ಪುನಃ ಅದೇ ವೇಗದಲ್ಲಿ ಹಾಜರಾಗುತ್ತಲೇ ಇವೆ. ಇದಕ್ಕೆ ಶಾಶ್ವತ ಪರಿಹಾರ ಯೋಜನೆಗಳಿಗೆ ಮಾತ್ರ ಸೀಮಿತವಾಗುವುದೋ ಎಂಬ ಆತಂಕ ಕೃಷಿಕರಿಗಿದೆ.