ಕಾಸರಗೋಡು: ಕೇಂದ್ರ ಸರ್ಕಾರ ಕೇರಳಕ್ಕೆ ಭರವಸೆ ನೀಡಿರುವ ಏಮ್ಸ್ ವೈದ್ಯಕೀಯ ಸಂಸ್ಥೆಯನ್ನು ಕಾಸರಗೋಡಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದ್ದು, ನ. 17ರಂದು ಜನಪರ ಒಕ್ಕೂಟ ವತಿಯಿಂದ ಏಮ್ಸ್‍ಗಾಗಿನ ಹಕ್ಕೊತ್ತಾಯ ರ್ಯಾಲಿಗೆ ಸಹಕರಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ.
ಚಿಕಿತ್ಸಾ ವಿಷಯದಲ್ಲಿ ಕಾಸರಗೋಡು ಜಿಲ್ಲೆಯ ಹಿಂದುಳಿಯುವಿಕೆಗೆ ಕೇರಳದಲ್ಲಿ ಆಳ್ವಿಕೆ ನಡೆಸಿರುವ ಎಡ ಹಾಗೂ ಐಕ್ಯರಂಗಗಳು ಸಮಾನ ಜವಾಬ್ದಾರರಾಗಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ ಪೂರ್ತಿಗೊಂಡರೂ, ಜಿಲ್ಲೆಯ ಚಿಕಿತ್ಸಾ ಅಗತ್ಯ ಪೂರೈಸಲು ಇದರಿಂದ ಸಾಧ್ಯವಾಗದು. ಸಾವಿರಾರು ಸಂಖ್ಯೆಯ ಎಂಡೋಸಲ್ಫಾನ್ ರೋಗಿಗಳನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಉನ್ನತ ವೈದ್ಯಕೀಯ ಸೇವೆ ಇನ್ನೂ ಮರೀಚಿಕೆಯಾಗಿದೆ. ಜಿಲ್ಲೆಗೆ'ಏಮ್ಸ್'ಎಂಬ ಬೇಡಿಕೆ ಈಡೇರುವುದರೊಂದಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಉಭಯ ರಂಗಗಳು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಗೆ ಸೂಕ್ತ ಉತ್ತರ ಲಭ್ಯವಾಗಲಿದೆ. ತಮ್ಮೆಲ್ಲ ವಿರೋಧ ಬದಿಗಿರಿಸಿ ಎಲ್ಲ ರಾಜಕೀಯ ಪಕ್ಷಗಳೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒಗ್ಗಟ್ಟಿನಿಂದ ಹೋರಾಡಬೇಕಾದ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.