ಉಪ್ಪಳ: ಜಗತ್ತಿನ ವಿವಿಧೆಡೆಗಳ ಜನರ ಅನುಭವಗಳು ಬೇರೆಬೇರೆಯಾದರೂ ಭಾವನೆಗಳು ಸಮಾನವಾಗಿರುತ್ತದೆ. ಇಂತಹ ಸಮಾನ ಭಾವಗಳು ಪರಸ್ಪರ ಅನುಸಂಧಾನಗೊಂಡಾಗ ವಿಶಿಷ್ಟ ಪರಿಕಲ್ಪನೆಗಳಾಗಿ ನೋವನ್ನು ತಣಿಸುವ, ಮನಸ್ಸನ್ನು ಮುದಗೊಳಿಸುವ ಸನ್ನಿವೇಶಗಳು ಸೃಷ್ಟಿಯಾಗುತ್ತದೆ ಎಂದು ನಿಟ್ಟೆ ವಿ. ವಿ. ಯ ಸಹಕುಲಾಧಿಪತಿ ಡಾ. ಎಂ. ಎಸ್. ಮೂಡಿತ್ತಾಯ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಸಮೀಪ ಬಾಯಿಕಟ್ಟೆಯಲ್ಲಿ ಕೇರಳದ ಸಾಹಿತ್ಯ-ಸಾಂಸ್ಕøತಿಕ ಸಂಘಟನೆಯಾದ ತಪಸ್ಯ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ ಒಂದು ದಿನದ ಕನ್ನಡ ಕಥಾನುವಾದ ಕಮ್ಮಟದ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತಾಡಿದರು.
ಪರಸ್ಪರ ಭಾವನೆಗಳು ಹಂಚಿಕೊಳ್ಳುವ ತುರ್ತು ಇಂದಿನ ಜಗತ್ತಿಗಿದೆ. ಮನುಷ್ಯ ಜೀವನದ ಗತಿ, ನೋವು-ನಲಿವುಗಳ ಹಂಚಿಕೆ ಕಥೆಗಳ ರೂಪದಲ್ಲಿ ನಿರೂಪಿಸಲ್ಪಡುವುದು ವರ್ತಮಾನದ ಹೆಜ್ಜೆಗಳ ಧ್ವನಿಗಳಷ್ಟೇ ಆಗದೆ ಭವಿಷ್ಯದ ಕೈದೀವಿಗೆಗಳಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾಷೆಯಿಂದ ಭಾಷೆಗೆ ಭಾಷಾಂತರಗಳು ಸಮೃದ್ದವಾಗಿ ನಡೆಯಬೇಕು ಎಮದು ಅವರು ತಿಳಿಸಿದರು.
ತಪಸ್ಯದ ಜಿಲ್ಲಾಧ್ಯಕ್ಷ ಬಾಲಚಂದ್ರ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ತಪಸ್ಯದ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಅನುವಾದ ಕಮ್ಮಟಗಳನ್ನು ವಿಪುಲೀಕರಿಸಲಾಗುವುದು ಎಂದು ತಿಳಿಸಿದರು.
ತಪಸ್ಯ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಅವರು ಮಾತನಾಡಿ, ಕಾಸರಗೋಡಿನ ಬಹುಭಾಷಾ ನೆಲೆಯ ಸಮೃದ್ದತೆಯಲ್ಲಿ ಭಾಷಾಂತರಗಳು ಹೆಚ್ಚು ಪ್ರಸ್ತುತ ಮತ್ತು ಸುಲಲಿತ ಎಂದರು. ಹೊಸ ತಲೆಮಾರಿನ ಅರಿವಿನ ವಿಸ್ತಾರತೆಯನ್ನು ಬೆಳೆಸುವಲ್ಲಿ ಪರಸ್ಪರ ಬೆಸೆಯುವ ಅನುವಾದ ಪ್ರಕಾರ ಬೆಳವಣಿಗೆ ಹೊಂದಬೇಕು ಎಂದರು.
ತಪಸ್ಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಜಿತ್ ಟಿ. ಉಪಸ್ಥಿತರಿದ್ದು ಶುಭಹಾರೈಸಿದರು. ದಿನಪೂರ್ತಿ ಜರಗಿದ ಅನುವಾದ ಕಮ್ಮಟದಲ್ಲಿ ಕನ್ನಡ ಮತ್ತು ಮಲಯಾಳಂ ಭಾಷೆಯ ಸುಮಾರು ಅರವತ್ತು ಮಂದಿ ಕವಿಗಳು ಲೇಖಕರು ವಿದ್ವಾಂಸರು ಭಾಗವಹಿಸಿದ್ದರು. ಕಾರ್ತಿಕ್ ಪಡ್ರೆ ಸ್ವಾಗತಿಸಿ, ವಂದಿಸಿದರು.