ಭೋಪಾಲ್ : ಭಾರತೀಯ ರೈಲ್ವೆ ಯ ರಾಮಾಯಣ ಎಕ್ಸ್‌ಪ್ರೆಸ್ ರೈಲುಗಳ ವೈಟರ್‌ಗಳ ಕೇಸರಿ ಧಿರಿಸು ವಿವಾದಕ್ಕೆ ಕಾರಣವಾಗಿದೆ. ಮಧ್ಯ ಪ್ರದೇಶದ ಉಜೈನಿಯಲ್ಲಿ ಸ್ವಾಮೀಜಿಗಳು ಧಿರಿಸಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲಿನ ವೈಟರ್‌ಗಳ ಕೇಸರಿ ಧಿರಿಸಿನ ಮೂಲಕ ಹಿಂದೂ ಧರ್ಮಕ್ಕೆ ಅವಮಾನ ಮಾಡಲಾಗುತ್ತಿದೆ. ಧಿರಿಸು ಬದಲಾವಣೆ ಮಾಡದಿದ್ದರೆ ಡಿಸೆಂಬರ್ 12ರಿಂದ ದೆಹಲಿಯಲ್ಲಿ ರೈಲು ತಡೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಜ್ಜೈನಿ ಅಖಾಡ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಈ ಕುರಿತು ಮಾತನಾಡಿದ್ದಾರೆ, "ರಾಮಾಯಣ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೇಸರಿ ಬಣ್ಣದ ಧಿರಿಸು ತೊಟ್ಟು ಉಪಾಹಾರ ಮತ್ತು ಊಟ ಬಡಿಸುವುದನ್ನು ಪ್ರತಿಭಟಿಸಿ ನಾವು ಕೇಂದ್ರ ರೈಲ್ವೇ ಸಚಿವರಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದೇವೆ" ಎಂದು ಹೇಳಿದ್ದಾರೆ.
"ಸಾಧುಗಳ ರೀತಿಯ ಶಿರಸ್ತ್ರಾಣದೊಂದಿಗೆ ಕೇಸರಿ ವಸ್ತ್ರವನ್ನು ಧರಿಸುವುದು ಮತ್ತು ರುದ್ರಾಕ್ಷಿಯ ಮಾಲೆಗಳನ್ನು ಧರಿಸುವುದು ಹಿಂದೂ ಧರ್ಮಕ್ಕೆ ಮತ್ತು ಹಿಂದೂಗಳಿಗೆ ಮಾಡುವ ಅವಮಾನವಾಗಿದೆ" ಎಂದು ಅವದೇಶಪುರಿ ತಿಳಿಸಿದ್ದಾರೆ.
"ಭಾರತೀಯ ರೈಲ್ವೆ ವೈಟರ್‌ಗಳ ಸಮವಸ್ತ್ರವನ್ನು ಬದಲಾವಣೆ ಮಾಡದಿದ್ದರೆ ದೆಹಲಿಯ ಸಫ್ದರ್ ಜಂಗ್ ರೈಲ್ವೆ ನಿಲ್ದಾಣದಲ್ಲಿ ಡಿಸೆಂಬರ್ 12ರಂದು ರೈಲುಗಳನ್ನು ತಡೆಯಲಾಗುತ್ತದೆ. ಸ್ವಾಮೀಜಿಗಳು ರೈಲು ಹಳಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಲಿದ್ದಾರೆ" ಎಂದರು.
"ಹಿಂದೂ ಧರ್ಮವನ್ನು ರಕ್ಷಣೆ ಮಾಡಲು ಇದು ಅನಿವಾರ್ಯವಾಗಿದೆ. ಈ ಧರಿಸು ವಿವಾದದ ಬಗ್ಗೆ ಉಜ್ಜೈನಿಯಲ್ಲಿ ಸಭೆ ನಡೆಸಿ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದು ಅವದೇಶಪುರಿಗಳು ಹೇಳಿದ್ದಾರೆ.
ನವೆಂಬರ್ 7ರಂದು ಸಂಚಾರ ಆರಂಭ; ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಹಾಗು ಹೋಗುವ ರಾಮಾಯಣ ಎಕ್ಸ್‌ಪ್ರೆಸ್ ರೈಲು ಸೇವೆಗೆ ನವೆಂಬರ್ 7ರಂದು ದೆಹಲಿಯ ಸಫ್ದರ್ ಜಂಗ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿತ್ತು. 17 ದಿನಗಳ ಕಾಲ ರೈಲು ಸಂಚಾರ ನಡೆಸಲಿದೆ.
ಒಟ್ಟು 7500 ಕಿ. ಮೀ. ಸಂಚಾರ ನಡೆಸುವ ಈ ರೈಲಿನ ಮೊದಲ ನಿಲ್ದಾಣ ಅಯೋಧ್ಯೆ. ಬಳಿಕ ನಂದಿಗ್ರಾಮ್, ಜನಕ್‌ಪುರ, ಸೀತಾಮರ್ಹಿ, ಸೀತಾ ಸಂಹಿತ ಸ್ಥಳ, ಪ್ರಯಾಗ, ಶೃಂಗವೇರಪುರ, ಚಿತ್ರಕೂಟ ಸೇರಿದಂತೆ ವಿವಿಧ ಕಡೆ ರೈಲು ಸಂಚಾರ ನಡೆಸಲಿದೆ.
ಐಆರ್‌ಸಿಟಿಸಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಮಾಯಣ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲಿನ ಬೋಗಿಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ರೈಲಿನಲ್ಲಿ ಪ್ರತ್ಯೇಕ ಶೌಚಾಲಯಗಳಿದ್ದು, ಸ್ನಾನಕ್ಕೂ ಸಹ ಅವಕಾಶ ನೀಡಲಾಗಿದೆ.
2018ರಲ್ಲಿ ಮೊದಲ ಬಾರಿಗೆ ರಾಮಾಯಣ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲಾಗಿತ್ತು. ಇದು ಯಶಸ್ವಿಯೂ ಆಗಿತ್ತು. ಬಳಿಕ ಮತ್ತೆ ರೈಲು ಸೇವೆ ಆರಂಭಿಸಬೇಕು ಎನ್ನುವ ಬೇಡಿಕೆ ಇತ್ತು. ಈ ಬಾರಿ ರೈಲ್ವೆ 2 ಪ್ಯಾಕೇಜ್ ಮೂಲಕ ರಾಮಾಯಣ ಎಕ್ಸ್‌ಪ್ರೆಸ್ ರೈಲನ್ನು ಓಡಿಸುತ್ತಿದೆ.
ಐಆರ್‌ಸಿಟಿಸಿಯ ಭಾರತ ದರ್ಶನ ಪ್ಯಾಕೇಜ್ ಭಾಗವಾಗಿ ಈ ರೈಲು ಓಡುತ್ತಿದೆ. ಜೈಪುರದಿಂದ ಹೊರಡುವ ರೈಲು ದೆಹಲಿ ಮೂಲಕ ಅಯೋಧ್ಯೆ ತಲುಪಲಿದೆ. ಮತ್ತೊಂದು ರೈಲು ಇಂಧೋರ್‌ನಿಂದ ಹೊರಡಲಿದ್ದು, ವಾರಣಾಸಿ ಮೂಲಕ ಅಯೋಧ್ಯೆ ತಲುಪಲಿದೆ.
ಈ ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರನ್ನು ರಾಮನ ಕುರಿತು ಸ್ಥಳಗಳ ಪರಿಚಯ ಮಾಡಿಸಲು ಚೆನ್ನೈನಿಂದ ಶ್ರೀಲಂಕಾಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ದರ 16,065 ಮತ್ತು 17,325 ರೂ. ಆಗಿದೆ.
ಈಗ ರೈಲಿನಲ್ಲಿ ಆಹಾರವನ್ನು ಪೂರೈಕೆ ಮಾಡುವ ವೈಟರ್‌ಗಳು ಕೇಸರಿ ಬಣ್ಣದ ಧಿರಿಸು ಧರಿಸಿರುವುದ, ಕೊರಳಲ್ಲಿನ ರುದ್ರಾಕ್ಷಿ ಹಾರ ಸ್ವಾಮೀಜಿಗಳ ಕಣ್ಣು ಕೆಂಪಗಾಗಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋಗಳು ಹರಿದಾಡುತ್ತಿವೆ.