ಕಾಸರಗೋಡು: ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆಗೆ ಮಂಜೂರಾದ ಆಂಬುಲೆನ್ಸ್‍ಗೆ ನಿನ್ನೆ ಚಾಲನೆ ನೀಡಲಾಯಿತು. ಆಸ್ಪತ್ರೆ ಆವರಣದಲ್ಲಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸದರು ಆಂಬ್ಯುಲೆನ್ಸ್‍ಗೆ 14,88,000 ರೂ.ಮಂಜೂರು ನೀಡಿದ್ದರು.
ಕೋವಿಡ್ ಮಾರಿಯ ಮೂರನೇ ಅಲೆಯನ್ನು ಎದುರಿಸಲು ಆತ್ಮರಕ್ಷಣೆಯೊಂದೇ ಮಾರ್ಗವಾಗಿದೆ ಎಂದು ಸಂಸದರು ಹೇಳಿದರು. ಕೋವಿಡ್ ಹರಡುವಿಕೆಯಿಂದಾಗಿ ಕೋವಿಡ್ ಸಂಬಂಧಿತ ವಿಷಯಗಳಿಗೆ ಹೆಚ್ಚಿನ ಸಂಸದರ ನಿಧಿಯನ್ನು ಖರ್ಚು ಮಾಡಲಾಗುತ್ತಿದ್ದು, ಜನರಲ್ ಆಸ್ಪತ್ರೆಯ ಜೊತೆಗೆ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮತ್ತು ಮುಳಿಯಾರ್ ಸಿಎಚ್‍ಸಿಗೆ ಆಂಬ್ಯುಲೆನ್ಸ್‍ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ಚಟುವಟಿಕೆಗಳಿಗಿಂತ ಜನರ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ ಎಂಬ ಕೇಂದ್ರದ ನಿರ್ದೇಶನದಂತೆ ಗರಿಷ್ಠ ಹಣ ಬಳಕೆ ಮಾಡಲಾಗುತ್ತಿದೆ ಎಂದರು. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಸಮಾಜಕ್ಕೆ ಅವಿರತ ಸೇವೆ ಸಲ್ಲಿಸಿದ ಆರೋಗ್ಯ ಕಾರ್ಯಕರ್ತರನ್ನು ಸಂಸದರು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸಿದ್ದರು. ಕಾಸರಗೋಡು ಆರ್‍ಡಿಒ ಅತುಲ್. ಎಸ್ ನಾಥ್ ಮುಖ್ಯ ಭಾಷಣ ಮಾಡಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪೂಚ್ಚಕ್ಕಾಡ್, ಶ್ರೀಲತಾ ಟೀಚರ್, ಮಹಮ್ಮದ್ ಸಾಲಿ, ಕರುಣ್ ತಾಪ, ಖಲೀಲ್ ಏರಿಯಾಲ್, ಸನ್ನಿ ಅರಮನೆ ಮಾತನಾಡಿದರು.
ಕಾಸರಗೋಡು ನಗರಸಭೆ ಅಧ್ಯಕ್ಷ ಅಡ್ವ ವಿ.ಎಂ.ಮುನೀರ್ ಸ್ವಾಗತಿಸಿ, ಆಸ್ಪತ್ರೆ ಅಧೀಕ್ಷಕ ಡಾ.ಕೆ.ಕೆ.ರಾಜಾರಾಂ ವಂದಿಸಿದರು. ಸಮಾರಂಭದಲ್ಲಿ ಕೋವಿಡ್ ಅವಧಿಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಆಂಬ್ಯುಲೆನ್ಸ್ ಚಾಲಕರನ್ನು ಸನ್ಮಾನಿಸಲಾಯಿತು. ಜುವನೇಶ್ ಕೆ.ಎಂ, ಕೆ.ಅಬ್ದುಲ್ ರಹಿಮಾನ್, ವೇಣುಗೋಪಾಲನ್, ವಿಜೇಶ್, ಅಹಮದ್ ಸಬೀರ್, ಡೇವಿಸ್ ಪಿಯು, ಮಣಿಕಂಠನ್ ಇ, ರವಿಚಂದ್ರ, ಕೃಷ್ಣನ್ ಮತ್ತು ರಘು ಅವರನ್ನು ಸಂಸದರು ಸನ್ಮಾನಿಸಿದರು.