ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಕರ್ನಾಟಕ ರಾಜ್ಯಕ್ಕೆ ಆಗಮಿಸಿರುವ ಇಬ್ಬರಲ್ಲೂ ಕೊರೋನಾ ಸೋಂಕು ದೃಢಪಟ್ಟಿದ್ದು, ಇದು ಡೆಲ್ಟಾ ಮಾದರಿ ಸೋಂಕೇ ಹೊರತು ಓಮಿಕ್ರಾನ್ ಅಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಆತಂಕದಲ್ಲಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಕ್ಷಿಣ ಆಫ್ರಿಕಾದಿಂದ ಕಳೆದ 20 ದಿನಗಳಲ್ಲಿ 94 ಮಂದಿ ಪ್ರಯಾಣಿಕರು ಆಗಮಿಸಿದ್ದು, ಈ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಿದ್ದು, ಇದು ಪ್ರಸ್ತುತ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ತಳಿ ಅಲ್ಲ. ಬದಲಿಗೆ ಈಗಾಗಲೇ ರಾಜ್ಯದಲ್ಲಿರುವ ಡೆಲ್ಟಾ ಮಾದರಿ ವೈರಸ್ ಎಂಬುದು ಸ್ಪಷ್ಟವಾಗಿದೆ.
ಈ ಇಬ್ಬರೂ ದಕ್ಷಿಣ ಆಫ್ರಿಕಾದವರಾಗಿದ್ದು, ಒಬ್ಬರು ನ.11ರಂದು, ಮತ್ತೊಬ್ಬರು ನ.20ರಂದು ಬೆಂಗಳೂರಿಗೆ ಆಗಮಿಸಿದ್ದರು. ಇಬ್ಬರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು, ಶನಿವಾರದವರೆಗೆ ಒಟ್ಟು 11 ರಾಷ್ಟ್ರಗಳಿಂದ 584 ಪ್ರಯಾಣಿಕರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ಪೈಕಿ ದಕ್ಷಿಣ ಆಫ್ರಿಕಾದಿಂದ 94 ಪ್ರಯಾಣಿಕರು ಆಗಮಿಸಿದ್ದು, ಎಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಇಬ್ಬರಿಗೆ ಕೊರೋನಾ ಸೋಂಕು ಕಂಡು ಬಂದಿದ್ದು, ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.
ಓಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಇದೀಗ ಆರೋಗ್ಯ ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ಗಂಟೆಗಳ ಕಾಲ ಕಟ್ಟೆಚ್ಚರ ವಹಿಸಿದ್ದು, ವಿದೇಶದಿಂದ, ವಿಶೇಷವಾಗಿ ದಕ್ಷಿಣ ಆಫ್ರಿಕಾ ಮತ್ತು ಅಂತಹ 10 ಅಪಾಯಕಾರಿ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಪರೀಕ್ಷೆಗೊಳಪಡಿಸುತ್ತಿದ್ದಾರೆ.
ಈ ನಡುವೆ ಪ್ರಯಾಣಿಕರೊಬ್ಬರನ್ನು ವಸಂತನಗರದ ಸ್ಟಾರ್ ಹೋಟೆಲ್‌ನಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ, ಇನ್ನೊಬ್ಬರನ್ನು ಬೊಮ್ಮನಹಳ್ಳಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಜಿನೋಮ್ ಸೀಕ್ವೆನ್ಸಿಂಗ್ ಸಮಿತಿಯ ಸದಸ್ಯ ಡಾ.ವಿಶಾಲ್ ರಾವ್ ಅವರು ಮಾತನಾಡಿ, "ಓಮಿಕ್ರಾನ್ ವಿರುದ್ಧ ಜಾಗರೂಕರಾಗಿರುವುದು ಅತ್ಯಂತ ಮುಖ್ಯವಾಗಿದೆ, ಇದು ಇತ್ತೀಚಿನ ರೂಪಾಂತರಿ ವೈರಸ್ ಆಗಿದೆ. ದಕ್ಷಿಣ ಆಫ್ರಿಕಾ, ಬ್ರಿಟನ್ ನಂತಹ ದೇಶಗಳಲ್ಲಿ ಡೆಲ್ಟಾ ರೂಪಾಂತರು ವೈರಸ್'ನ್ನೂ ಈ ವೈರಸ್ ಹಿಂದಿಕ್ಕಿದೆ, ಈ ವೈರಸ್ ನಮ್ಮ ರಾಜ್ಯದಲ್ಲೂ ಪತ್ತೆಯಾದರೆ ಸೋಂಕು ವೇಗವಾಗಿ ಹರಡುವುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು ಎಂದು ತಿಳಿಸಿದ್ದಾರೆ.
ಫಿಲಡೆಲ್ಫಿಯಾ ಮೂಲದ ಗಣಿತಶಾಸ್ತ್ರಜ್ಞ ಅತಿಶ್ ಬಾಗ್ಚಿ ಅವರು ಮಾತನಾಡಿ, ವೈರಸ್ ಸಾಕಷ್ಟು ರೂಪಾಂತರಗಳನ್ನು ಹೊಂದುತ್ತಿದೆ. ರೂಪಾಂತರಿ ವೈರಸ್ ಜೀವಂತವಾಗಿರಲು ಹೀಗೆಯೇ ಬಿಟ್ಟರೆ, ಅದು ಅಪಾಯವನ್ನು ತಂದೊಡ್ಡಲಿದೆ. ಈ ವೈರಸ್ ಗಳು ಜೀವಕೋಶಗಳಿಗೆ ಸೋಂಕು ತಗುಲಿಸುವ ಸುಧಾರಿತ ಸಾಮರ್ಥ್ಯವನ್ನು ಪಡೆದುಕೊಂಡರೆ ಮತ್ತು ಆತಿಥೇಯರ ಪ್ರತಿರಕ್ಷಣಾ ವ್ಯವಸ್ಥೆಯಿಂದ (ಲಸಿಕೆಯಿಂದ ಸಹಾಯ ಮಾಡಲ್ಪಟ್ಟಿರಲಿ ಅಥವಾ ಇಲ್ಲದಿರಲಿ) ಪತ್ತೆ ಮಾಡುವುದನ್ನು ತಪ್ಪಿಸಿದರೆ, ನಂತರ ವೈರಸ್ ವಿಕಸನೀಯ ಪ್ರಯೋಜನವನ್ನು ಪಡೆಯುತ್ತದೆ ಮತ್ತು ಪ್ರಸರಣವನ್ನು ಮುಂದುವರೆಸುತ್ತದೆ. ಆದ್ದರಿಂದ, ಜನರು ತಮಗೆ ತಾವೇ ಜಾಗರೂಕವಾಗಿರಬೇಕಿದೆ ಎಂದು ಹೇಳಿದ್ದಾರೆ.