ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ, ವಿಮಾನದಲ್ಲಿ ಬಳಸಬಹುದಾದ 'ಸ್ಮಾರ್ಟ್ ಆಯಂಟಿ ಏರ್‌ಫೀಲ್ಡ್ ವೆಪನ್' ಬಾಂಬ್ ಅನ್ನು ಬುಧವಾರ ರಾಜಸ್ಥಾನದ ಜೈಸಲ್ಮೆರ್‌ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿಮಾನದ ಮೂಲಕ ಉಡಾಯಿಸಬಹುದಾದ ಈ ಬಾಂಬ್ ಅನ್ನು ಡಿಆರ್‌ಡಿಒ ಮತ್ತು ಭಾರತೀಯ ವಾಯುಪಡೆಯು ಜಂಟಿಯಾಗಿ ಪರೀಕ್ಷೆಗೆ ಒಳಪಡಿಸಿವೆ.
ಅಕ್ಟೋಬರ್ 28ರಂದು ಮತ್ತು ನವೆಂಬರ್ 3ರಂದು ಎರಡು ಬಾರಿ ಬಾಂಬ್ ಅನ್ನು ಪರೀಕ್ಷಿಸಲಾಗಿದೆ. ಮೊದಲು ಉಪಗ್ರಹ ಆಧರಿತ ಪಥದರ್ಶಕದ ನೆರವಿನಿಂದ ಪರೀಕ್ಷೆ ನಡೆಸಲಾಗಿತ್ತು. ಎರಡನೇ ಬಾರಿ ಎಲೆಕ್ಟ್ರೋ-ಆಪ್ಟಿಕಲ್ ಸಂವೇಧಕಗಳ ನೆರವಿನಿಂದ ಪರೀಕ್ಷೆ ನಡೆಸಲಾಯಿತು. ಎರಡೂ ಪರೀಕ್ಷೆಗಳಲ್ಲಿ ಬಾಂಬ್ ತನ್ನ ಗುರಿಯನ್ನು ಕರಾರುವಾಕ್ಕಾಗಿ ಧ್ವಂಸ ಮಾಡಿತು ಎಂದು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ. ಎಲೆಕ್ಟ್ರೋ-ಆಪ್ಟಿಕಲ್ ಸಂವೇದಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
ಈ ಬಾಂಬ್, 100 ಕಿ.ಮೀ.ವರೆಗಿನ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇಂತಹ ಬಾಂಬ್ ಅನ್ನು ಎಲೆಕ್ಟ್ರೋ-ಆಪ್ಟಿಕಲ್ ಸಂವೇದಕ ತಂತ್ರಜ್ಞಾನ ಬಳಸಿ, ವಿಮಾನದ ಮೂಲಕ ಪರೀಕ್ಷೆಗೆ ಒಳಪಡಿಸಿದ್ದು ಇದೇ ಮೊದಲು ಎಂದು ರಕ್ಷಣಾ ಸಚಿವಾಲಯ ಹೇಳಿದೆ.