ನವದೆಹಲಿ: ರಾಜ್ಯದ ಜೈಲುಗಳಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಘಟಕಗಳ ಆದಾಯದಲ್ಲಿ ತೀವ್ರ ಕುಸಿತ ಉಂಟಾಗಿದೆ ಎಂದು ಸರಕಾರ ಹೇಳಿದೆ. ಕೊರೋನಾ ಅವಧಿಯಲ್ಲಿ ಪೆರೋಲ್‍ನಲ್ಲಿರುವ ಕೈದಿಗಳು ಮನೆಗಳಿಗೆ ತೆರಳಿರುವುದರಿಂದ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ.
ಪೆರೋಲಿನಲ್ಲಿ ತೆರಳಿದವರು ಹಿಂತಿರುಗದ ಕಾರಣ ಅನೇಕ ಕೈಗಾರಿಕಾ ಘಟಕಗಳು ಮುಚ್ಚಲ್ಪಟ್ಟಿವೆ. ಕೆಲಸ ಮಾಡಲು ಜನರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೈದಿಗಳ ಪೆರೋಲ್ ನ್ನು ವಿಸ್ತರಿಸದಂತೆ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದೆ.
ಸುಪ್ರೀಂ ಕೋರ್ಟ್‍ಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಈ ಮನವಿ ಮಾಡಲಾಗಿದೆ. ರಾಜ್ಯ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಆರ್. ಸುಭಾಷ್ ಅವರು ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಪ್ರಮುಖವಾಗಿ ಜೈಲುಗಳಲ್ಲಿನ ಕೈಗಾರಿಕಾ ಉದ್ಯಮಗಳ ಆದಾಯ ನಷ್ಟದ ಬಗ್ಗೆ ತಿಳಿಸಲಾಗಿದೆ.
ರಾಜ್ಯದ ಜೈಲುಗಳಲ್ಲಿ ಅಡುಗೆ, ಸಲೂನ್, ಕೆಫೆಟೇರಿಯಾ ಮತ್ತು ರಬ್ಬರ್ ಟ್ಯಾಪಿಂಗ್ಗಾಗಿ ವಿವಿಧ ಘಟಕಗಳಿವೆ. ಘಟಕಗಳನ್ನು ನಡೆಸುವುದರಿಂದ ಬರುವ ಅಲ್ಪ ಆದಾಯವೂ ಕೈದಿಗಳಿಗೆ ನೆರವಾಗುತ್ತದೆ.
ಆದಾಗ್ಯೂ, ಕೊರೋನಾ ವಿಸ್ತರಣೆಯ ಸಂದರ್ಭ ಕೈದಿಗಳು ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿ ಪೆರೋಲ್ ಅವಧಿ ವಿಸ್ತರಣೆಗೆ ಆಗ್ರಹಿಸಿದ್ದರು. ಬಳಿಕ ಪೆರೋಲ್ ನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಯಿತು. ಪ್ರಸ್ತುತ ಕೊರೋನಾ ಹರಡುವಿಕೆಯಲ್ಲಿ ಕುಸಿತವಾದ ಹಿನ್ನೆಲೆಯಲ್ಲಿ ಪೆರೋಲ್ ಅವಧಿಯನ್ನು ಮತ್ತಷ್ಟು ವಿಸ್ತರಿಸಬಾರದು ಎಂದು ಸರ್ಕಾರದ ಅಫಿಡವಿಟ್ ನಲ್ಲಿ ವಿನಂತಿಸಿದೆ. ರಾಜ್ಯ ಸರ್ಕಾರ ಕೈದಿಗಳು ಆದಷ್ಟು ಬೇಗ ಜೈಲುಗಳಿಗೆ ಮರಳುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ. ಪ್ರಕರಣವು ಈ ವಾರ ನ್ಯಾಯಾಲಯದಲ್ಲಿ ವಿಚಾರಣೆ ಬರಲಿದೆ.