ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯಮಾಲಿನ್ಯ ಮುಂದುವರೆದಿದ್ದು, ವಾಯು ಗುಣಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಲ್ಲಿನ ಭೌತಿಕ ತರಗತಿಗಳ ಮೇಲಿನ ನಿರ್ಬಂಧ ಮುಂದುವರೆಸಲಾಗಿದೆ.
ದೆಹಲಿಯಲ್ಲಿ ಆನ್‌ಲೈನ್ ತರಗತಿಗಳು ಮತ್ತು ಬೋರ್ಡ್ ಪರೀಕ್ಷೆಗಳು ಮುಂದುವರಿಯುತ್ತಿರುವಂತೆಯೇ ದೆಹಲಿಯ ಶಾಲೆಗಳು ಮುಂದಿನ ಆದೇಶದವರೆಗೂ ದೈಹಿಕ ತರಗತಿಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ ಎಂದು ಶಿಕ್ಷಣ ನಿರ್ದೇಶನಾಲಯ (DoE) ಭಾನುವಾರ ಪ್ರಕಟಿಸಿದೆ.
ಭಾನುವಾರ ಬೆಳಿಗ್ಗೆ ವಾಯು ಗುಣಮಟ್ಟವು "ತುಂಬಾ ಕಳಪೆ" ಆಗಿತ್ತು. ನಗರದಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) 382 ಕ್ಕೆ ಏರಿಕೆಯಾಗಿದೆ. ನಿನ್ನೆ ಅಂದರೆ ಶನಿವಾರದಂದು 24-ಗಂಟೆಗಳ ಸರಾಸರಿ AQI 374 ಆಗಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ.
ಎನ್‌ಸಿಆರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಪರಿಸರ ಇಲಾಖೆ ಸೂಚಿಸಿದೆ. ಆದ್ದರಿಂದ ಮುಂದಿನ ಆದೇಶದವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಹೆಚ್ಚುವರಿ ಶಿಕ್ಷಣ ನಿರ್ದೇಶಕಿ ರೀಟಾ ತಿಳಿಸಿದ್ದಾರೆ.
"ಆದಾಗ್ಯೂ, ಆನ್‌ಲೈನ್ ಬೋಧನಾ ಕಲಿಕಾ ಚಟುವಟಿಕೆಗಳು ಮತ್ತು ಬೋರ್ಡ್ ತರಗತಿಗಳಿಗೆ ಪರೀಕ್ಷೆಗಳನ್ನು ಮೊದಲೇ ನೀಡಲಾದ ಮಾರ್ಗಸೂಚಿಗಳ ಪ್ರಕಾರ ನಡೆಸಲಾಗುವುದು ಅವರು ಮಾಹಿತಿ ನೀಡಿದರು.
ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ನವೆಂಬರ್ 13 ರಂದು ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದಾಗಿ ಘೋಷಿಸಿತ್ತು.