ಮುಂಬೈ: ಭಾರತ ಟಿ20 ಕ್ರಿಕೆಟ್ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಹೈದರಾಬಾದ್ ಮೂಲದ ವ್ಯಕ್ತಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಯುಎಇನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದದ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮಗಳಿಗೆ ಆನ್ಲೈನ್ನಲ್ಲಿ ಅತ್ಯಾಚಾರದ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಸೈಬರ್ ಸೆಲ್ ಪೊಲೀಸರು ಇದೀಗ ಹೈದರಾಬಾದ್ ಮೂಲದ ರಾಮನಾಗೇಶ್ ಅಲಿಬತಿನಿ ಎಂಬ ವ್ಯಕ್ತಿಯನ್ನು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯ ಮಗಳ ಬಗ್ಗೆ ಈತ ಕೆಟ್ಟದಾಗಿ ಕಮೆಂಟ್ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಜಾಡು ಹಿಡಿದ ಹೊರಟ ಮುಂಬೈ ಸೈಬರ್ ಸೆಲ್ ಪೊಲೀಸರ ಬಲೆಗೆ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 23 ವರ್ಷದ ರಾಮನಾಗೇಶ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಈ ಹಿಂದೆ ಫುಡ್ ಡೆಲಿವರಿ ಆ್ಯಪ್ಗಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಭಾರತ 10 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋಲನುಭವಿಸಿತ್ತು. ಈ ಪಂದ್ಯದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಸೆಹ್ವಾಗ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿ, ಶಮಿ ಪರವಾಗಿ ನಿಂತಿದ್ದರು. ನಾಯಕ ಕೊಹ್ಲಿ ಕೂಡ ಶಮಿ ವಿರುದ್ದದ ಕೋಮು ನಿಂದನೆಯನ್ನು ಖಂಡಿಸಿದ್ದರು.
ಕೊಹ್ಲಿಯ ಹೇಳಿಕೆಯ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕನ ವಿರುದ್ದ ತಿರುಗಿ ಬಿದ್ದಿದ್ದ ಕೆಲ ದುಷ್ಕರ್ಮಿಗಳು, ಅನ್ಯಧರ್ಮೀಯನ ಪರ ನಿಂತಿದ್ದಕ್ಕಾಗಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಕೊಹ್ಲಿಯ 10 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸೆಗುವುದಾಗಿ ಬೆದರಿಕೆಗಳ ಕಮೆಂಟ್ ಮಾಡಿದ್ದರು.