ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿದ್ದು, ಈ ಬೆಳವಣಿಗೆಯನ್ನು ತುರ್ತುಪರಿಸ್ಥಿತಿ ಎಂದು ಹೇಳಿರುವ ಸುಪ್ರೀಂಕೋರ್ಟ್ ವಾಯುಮಾಲಿನ್ಯ ತಡೆಗಟ್ಟಲು ತುರ್ತು ಕ್ರಮಗಳ ಕೈಗೊಳ್ಳುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಶನಿವಾರ ತಿಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್'ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಇಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿಸಿದ ನ್ಯಾಯಾಲಯವು, ವಾಹನಗಳು, ಪಟಾಕಿಗಳು, ಕೈಗಾರಿಕೆಗಳು ಹಾಗೂ ಧೂಳಿನಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಲು ಎರಡು ದಿನಗಳ ಲಾಕ್‌ಡೌನ್ ಘೋಷಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯವನ್ನು ಪ್ರಸ್ತುತ "ತೀವ್ರ" ಮಟ್ಟದಿಂದ ತಗ್ಗಿಸಲು ಕೆಲವು ತಕ್ಷಣದ ಕ್ರಮಗಳನ್ನು ಪರಿಗಣಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ತಿಳಿಸಿತು.
"ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ನೀವೇ ನೋಡಿ.... ನಮ್ಮ ಮನೆಗಳಲ್ಲಿಯೂ ಕೂಡ ನಾವು ಮಾಸ್ಕ್ ಗಳನ್ನು ಧರಿಸಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
"ಪ್ರತಿಯೊಬ್ಬರೂ ರೈತರನ್ನು ದೂಷಿಸುವ ಉತ್ಸಾಹವನ್ನು ಹೊಂದಿದ್ದಾರೆ. ಕಳೆದ ಏಳು ದಿನಗಳಿಂದ ದೆಹಲಿಯಲ್ಲಿ ಹೇಗೆ ಪಟಾಕಿಗಳನ್ನು ಹಚ್ಚಲಾಗಿದೆ ಎಂಬುದನ್ನು ನೀವು ನೋಡಿದ್ದೀರಾ? ಇದು ತುರ್ತು ಪರಿಸ್ಥಿತಿ, ವಾಯುಮಾಲಿನ್ಯ ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ" ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠವು ಹೇಳಿತು.
ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪಂಜಾಬ್‌ನಲ್ಲಿ ಬೆಳೆಯ ಒಣ ತ್ಯಾಜ್ಯಗಳನ್ನು ಸುಡಲಾಗುತ್ತಿದೆ ಎಂದು ಹೇಳಿದರು.
ನಿಮ್ಮ ಈ ಹೇಳಿಕೆಯು ವಾಯುಮಾಲಿನ್ಯಕ್ಕೆ ರೈತರೇ ಜವಾಬ್ದಾರರು ಎಂದು ಬಿಂಬಿಸುತ್ತಿರುವಂತಿದೆ. ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ನೀವು ಕೈಗೊಂಡಿರುವ ಕ್ರಮಗಳಾದರೂ ಏನು? ಎಂದು ನ್ಯಾಯಪೀಠ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ವಾಯುಮಾಲಿನ್ಯಕ್ಕೆ ರೈತರು ಮಾತ್ರ ಜವಾಬ್ದಾರರು ಎಂದು ನಾನು ಹೇಳುತ್ತಿಲ್ಲ ಎಂದರು.
ಬಳಿಕ ಸೋಮವಾರದೊಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ರಮಣ ಅವರು, "ತುರ್ತು ಕ್ರಮಗಳನ್ನು ಹೇಗೆ ತೆಗೆದುಕೊಳ್ಳಲು ನೀವು ಯೋಜಿಸುತ್ತೀರಿ ಎಂದು ನಮಗೆ ತಿಳಿಸಿ? ಎರಡು ದಿನಗಳ ಲಾಕ್‌ಡೌನ್ ಸಾಧ್ಯವೇ ? ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟವನ್ನು ಕಡಿಮೆ ಮಾಡುವ ನಿಮ್ಮ ಯೋಜನೆ ಏನು? ಎಂದು ಕೇಳಿದರು.