ಭೋಪಾಲ್: 'ಮೇಲ್ಜಾತಿಯ ಮಹಿಳೆ'ಯರ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ತಮ್ಮ ಸಚಿವ ಸಹೋದ್ಯೋಗಿಗೆ ಎಚ್ಚರಿಕೆ ನೀಡಿರುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
"ಠಾಕೂರ್, ಠಾಕರ್ ಅವರಂತಹ ದೊಡ್ಡ ಜನರು ಹಾಗೂ ಕೆಲವು ಇತರ ದೊಡ್ಡ ಜನರು ತಮ್ಮ ಮಹಿಳೆಯರನ್ನು ಮನೆಯೊಳಗೆಯೇ ಇರಿಸುತ್ತಾರೆ ಹಾಗೂ ಅವರನ್ನು ಹೊರಗೆ ಹೋಗಲು ಬಿಡುವುದಿಲ್ಲ, ಆದರೆ ನಮ್ಮ ಗ್ರಾಮಗಳ (ಕೆಳ ವರ್ಗದ) ಮಹಿಳೆಯರು ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ ಹಾಗೂ ಮನೆಗೆಲಸವನ್ನೂ ನಿರ್ವಹಿಸುತ್ತಾರೆ. ದೊಡ್ಡ ಜನರ - ಠಾಕುರ್ ಜನರ ಮಹಿಳೆಯರನ್ನು ಅವರ ಮನೆಗಳಿಂದ ಹೊರಗೆಳೆಯಿರಿ. ಇದರಿಂದ ಅವರು ಮುಂದೆ ಸಾಗುವಂತಾಗುವುದಿಲ್ಲವೇ?'' ಎಂದು ಅವರು ಪ್ರಶ್ನಿಸಿದರು.
ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಚೌಹಾಣ್, "ನಾನು ಬಿಸಾಹುಲಾಲ್ ಸಿಂಗ್ ಅವರ ಜತೆ ಮಾತನಾಡಿದೆ. ಅವರು ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಭಾವನೆಯೇನೇ ಇರಲಿ, ತಪ್ಪು ಸಂದೇಶ ರವಾನೆಯಾಗಬಾರದು. ಪ್ರತಿ ಮಾತನ್ನು ಎಚ್ಚರಿಕೆಯಿಂದ ನೀಡಬೇಕಿದೆ. ಇಂತಹ ಹೇಳಿಕೆಗಳನ್ನು ಯಾವುದೇ ಸನ್ನಿವೇಶದಲ್ಲಿ ನೀಡಬಾರದೆಂದು ಎಚ್ಚರಿಸಿದ್ದೇನೆ,'' ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿ ಡಿ ಶರ್ಮ ಕೂಡ ಸಚಿವರ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಹಾಗೂ ಅದನ್ನು ದುರಾದೃಷ್ಟಕರ ಎಂದು ಬಣ್ಣಿಸಿದ್ದಾರೆ. "ನಾನು ಪಕ್ಷದ ಪರ ಕ್ಷಮೆಯಾಚಿಸುತ್ತೇನೆ,'' ಎಂದೂ ಅವರು ಹೇಳಿದ್ದಾರೆ.
ಈಗಾಗಲೇ ಕ್ಷಮೆಯಾಚಿಸಿರುವ ಸಚಿವ ಮತ್ತೊಮ್ಮೆ ವೀಡಿಯೋ ಸಂದೇಶದ ಮುಖಾಂತರ ಕ್ಷಮೆ ಕೋರಿದ್ದಾರೆ.
ಕಳೆದ ಶುಕ್ರವಾರ, ಸಚಿವರ ಹೇಳಿಕೆಯನ್ನು ವಿರೋಧಿಸಿ ಶ್ರೀ ರಾಜಪುತ್ ಕರ್ನಿ ಸೇನಾ ಸಚಿವರ ಪ್ರತಿಕೃತಿಯನ್ನು ದಹಿಸಿತ್ತಲ್ಲದೆ ಅವರ ಕಾರನ್ನು ಸುತ್ತುವರಿದು ಅವರಿಗೆ ಕರಿಪತಾಕೆ ತೋರಿಸಿತ್ತು.