ನವದೆಹಲಿ: ಮಧ್ಯಪ್ರದೇಶದ ಇಂದೋರ್ ನಗರವು ಸತತ ಐದನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟಿದೆ. ರಾಜ್ಯಗಳ ವಿಭಾಗದಲ್ಲಿ ಛತ್ತೀಸಗಢ ಮೊದಲ ಸ್ಥಾನ ಪಡೆದಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಯನ್ನು ಶನಿವಾರ ಘೋಷಣೆ ಮಾಡಿದೆ.
40 ಲಕ್ಷ ಜನಸಂಖ್ಯೆ ಇರುವ ದೇಶದ ಐದು ಅಗ್ರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಎರಡನೇ ಸ್ಥಾನದಲ್ಲಿದೆ.
3 ಲಕ್ಷದಿಂದ 10ಲಕ್ಷ ಜನಸಂಖ್ಯೆಯ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಎರಡನೇ ಸ್ಥಾನದಲ್ಲಿದ್ದರೆ, ಮೈಸೂರು ಐದನೇ ಸ್ಥಾನದಲ್ಲಿದೆ.
25ರಿಂದ 50 ಸಾವಿರ ಜನಸಂಖ್ಯೆಯ ವಿಭಾಗದಲ್ಲಿ, ದಕ್ಷಿಣ ವಲಯದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಾಲ್ಕನೇ ಸ್ಥಾನದಲ್ಲಿದೆ.
50 ಸಾವಿರದಿಂದ 1 ಲಕ್ಷ ಜನಸಂಖ್ಯೆ ಇರುವ ದಕ್ಷಿಣದ ವಲಯದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಬಾಗಲಕೋಟೆಯ ಮುದೋಳ ಐದನೇ ಸ್ಥಾನದಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ವಾರಣಾಸಿಯು 'ಸ್ವಚ್ಛ ಗಂಗಾ ನಗರ' ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಬಿಹಾರದ ಮುಂಗೇರ್ ಮತ್ತು ಪಾಟ್ನಾ ನಗರಗಳು ಈ ವಿಭಾಗದಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಇಂದೋರ್ ಮತ್ತು ಸೂರತ್ 'ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ-2021' ಪಟ್ಟಿಯಲ್ಲಿ ಮತ್ತೊಮ್ಮೆ ತಮ್ಮ ಸ್ಥಾನ ಖಾತ್ರಿಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದರೆ, ಹಿಂದಿನ ಬಾರಿಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ನವಿಮುಂಬೈ ಈ ಬಾರಿ ಒಂದು ಸ್ಥಾನ ಕೆಳಗೆ ಜಾರಿದೆ. ಅದರ ಜಾಗವನ್ನು ವಿಜಯವಾಡ ತನ್ನದಾಗಿಸಿಕೊಂಡಿದೆ. ನವಿ ಮುಂಬೈ ಈ ಬಾರಿ ನಾಲ್ಕನೇ ಸ್ಥಾನದಲ್ಲಿದೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಇತರರ ಸಮ್ಮುಖದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿಗಳನ್ನು ವಿತರಿಸಿದರು.
100 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಚತ್ತೀಸಗಢ ಸ್ವಚ್ಛರಾಜ್ಯ ಎನಿಸಿಕೊಂಡಿದ್ದರೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕರ್ನಾಟಕ ನಾಲ್ಕನೇ ಸ್ವಚ್ಛ ರಾಜ್ಯವಾಗಿದೆ. 100 ಕ್ಕಿಂತ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳ ವಿಭಾಗದಲ್ಲಿ, ಜಾರ್ಖಂಡ್ ಮೊದಲ ಸ್ಥಾನದಲ್ಲಿದೆ, ಹರಿಯಾಣ ಮತ್ತು ಗೋವಾ ನಂತರದ ಸ್ಥಾನದಲ್ಲಿದೆ.
ದೇಶದ ಸ್ವಚ್ಛ ನಗರಗಳು
ಇಂದೋರ್
ಸೂರತ್
ವಿಜಯವಾಡ
ಹಾಪುರ
ರಾಜ್‌ಕೋಟ್