ನವದೆಹಲಿ: ಲೇಖಕರಾದ ತ್ರಿಪುರ್ದಮನ್ ಸಿಂಗ್ ಹಾಗೂ ಆದಿಲ್ ಹುಸೇನ್ ಅವರು ರಚಿಸಿರುವ 'ನೆಹರು: ದಿ ಡಿಬೇಟ್ಸ್ ದಟ್ ಡಿಫೈನ್ಡ್ ಇಂಡಿಯಾ' ಎಂಬ ನೂತನ ಕೃತಿಯು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ರಾಜಕೀಯ ದೃಷ್ಟಿಕೋನ, ಅವರ ಸಮಕಾಲೀನ ನಾಯಕರು ಹಾಗೂ ರಾಜಕೀಯ ವಿರೋಧಿಗಳ ಕುರಿತು ಬೆಳಕು ಚೆಲ್ಲುತ್ತದೆ.
ಈ ಕೃತಿಯು ಗುರುವಾರ (ನ.11) ಬಿಡುಗಡೆಯಾಗಲಿದೆ. ನೆಹರು ಅವರ ಸೈದ್ಧಾಂತಿಕ ನಿಲುವುಗಳು, ನವ ಭಾರತ ನಿರ್ಮಾಣದಲ್ಲಿ ಅವರ ಕೊಡುಗೆಗಳ ಕುರಿತು ಈ ಕೃತಿ ಹೊಸ ಹೊಳಹುಗಳನ್ನು ಒಳಗೊಂಡಿದೆ ಎಂದು ಕೃತಿಕಾರರು ಅಭಿಪ್ರಾಯಪಟ್ಟಿದ್ದಾರೆ.
'ನೆಹರು ಅವರು ತಮ್ಮ ಸಮಕಾಲೀನ ಮುಖಂಡರೊಂದಿಗೆ ನಡೆಸಿದ ಸಂವಾದಗಳು, ಚರ್ಚೆಗಳನ್ನು ಅವಲೋಕಿಸಿದಾಗ ಅವರ ವಿಚಾರಧಾರೆಗಳ ದರ್ಶನವಾಗುತ್ತದೆ. ಅವರು ಕೈಗೊಂಡ ಅನೇಕ ನಿರ್ಧಾರಗಳು ಈಗ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿವೆ. ನೆಹರು ಆಗಿನ ಸಂದರ್ಭದಲ್ಲಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಅದಕ್ಕೆ ಏನು ಕಾರಣ ಎಂಬುದನ್ನು ತಿಳಿದುಕೊಳ್ಳಲು ಈಗ ಸೂಕ್ತ ಸಮಯ ಎಂಬುದು ನಮ್ಮ ಭಾವನೆ' ಎಂದು ಲೇಖಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಆಗಿನ ರಾಜಕೀಯ ಸಂದರ್ಭದಲ್ಲಿ ಪ್ರಮುಖವಾಗಿ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಅಲಿ ಜಿನ್ನಾ, ಸರ್ದಾರ ವಲ್ಲಭಭಾಯಿ ಪಟೇಲ್ ಹಾಗೂ ಶ್ಯಾಮ್ ಪ್ರಸಾದ ಮುಖರ್ಜಿ ಅವರೊಂಗಿನ ನೆಹರು ಅವರ ವೈಚಾರಿಕ ಮುಖಾಮುಖಿ ಕುರಿತು ಈ ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'1929ರಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ನೆಹರು ಪ್ರಧಾನಿಯಾಗಿ ಸೇವೆ ಸಲ್ಲಿಸಿ, 1964ರಲ್ಲಿ ನಿಧನರಾದರು. ಈ ಸುದೀರ್ಘ ಅವಧಿಯಲ್ಲಿ ಅವರು ಭಾರತದ ರಾಜಕೀಯ ಕ್ಷೇತ್ರದ ಮೇರು ವ್ಯಕ್ತಿಯಾಗಿದ್ದರು. ದಕ್ಷಿಣ ಏಷ್ಯಾದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ' ಎಂದು ಕೃತಿಕಾರರು ಪ್ರತಿಪಾದಿಸಿದ್ದಾರೆ.