ಮುಂಬೈ: 'ಹಡಗುಗಳು, ಜಲಾಂತರ್ಗಾಮಿಗಳೂ ಸೇರಿದಂತೆ ಹಲವಾರು ಮಿಲಿಟರಿ ಸಾಮಗ್ರಿಗಳನ್ನು ಪಾಕಿಸ್ತಾನಕ್ಕೆ ಚೀನಾ ಪೂರೈಸುತ್ತಿದೆ. ಉಭಯ ದೇಶಗಳ ನಡುವಿನ ಈ ಸಹಕಾರ ಪ್ರಾದೇಶಿಕ ಭದ್ರತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ' ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂವೀರ್ ಸಿಂಗ್ ಗುರುವಾರ ಹೇಳಿದರು.
ಸ್ಕಾರ್ಪಿಯಾನ್ ಸರಣಿಯ ಜಲಾಂತರ್ಗಾಮಿ 'ಐಎನ್‌ಎಸ್ ವೇಲಾ'ವನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.
ನೌಕಾಪಡೆಗೆ ಸಂಬಂಧಿಸಿ ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಈ ಸಹಕಾರವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬೆಳವಣಿಗೆಯಿಂದಾಗಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಹ ಭಾರತ ಸನ್ನದ್ಧವಾಗಬೇಕಿದೆ' ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಚೀನಾ ಸ್ಟೇಟ್ ಶಿಪ್‌ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಸಿಎಸ್‌ಎಸ್‌ಸಿ) ನಿರ್ಮಿಸಿರುವ ಯುದ್ಧನೌಕೆಯೊಂದನ್ನು ಇತ್ತೀಚೆಗೆ ಶಾಂಘೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ.