ತಿರುವನಂತಪುರ: ಇಂಗ್ಲಿಷ್ ನಲ್ಲಿ ಬ್ಲಾಕ್ ನೈಟ್ ಶೇಡ್ ಅಥವಾ ಸೋಲಾನಮ್ ನಿಗ್ರಮ್ ಎಂದು ಕರೆಯಲಾಗುವ ಮಾನತಕ್ಕಲ್ಲಿ ತನ್ನ ಔಷಧೀಯ ಮೌಲ್ಯದಿಂದ ಮನೆಮದ್ದು ಎಂದು ಹೆಸರುವಾಸಿಯಾಗಿದೆ.ಇದನ್ನು ಕನ್ನಡದಲ್ಲಿ ಕಾಕೆ ಹಣ್ಣು, ಗಣಿಕೆ ಸೊಪ್ಪು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.
ಪಿತ್ತಕೋಶ ಕ್ಯಾನ್ಸರ್ ಚಿಕಿತ್ಸೆಗೆ ಗಣಿಕೆ ಸೊಪ್ಪಿನಿಂದ ಪ್ರತ್ಯೇಕಿಸಲಾದ ಸಂಯುಕ್ತವನ್ನು ಇದೀಗ ಅಮೆರಿಕದ ಪುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ ಗಮನಿಸಿದ್ದು, ಇದನ್ನು ಪತ್ತೆ ಹಚ್ಚಿದ ರಾಜೀವ್ ಗಾಂಧಿ ಸೆಂಟರ್ ಆಫ್ ಬಯೋಟೆಕ್ನಾಲಾಜಿಯ ವಿಜ್ಞಾನಿಗಳ ತಂಡಕ್ಕೆ ಧನ್ಯವಾದ ಸಲ್ಲಿಸಿದೆ.
ರಾಜೀವ್ ಗಾಂಧಿ ಸೆಂಟರ್ ಆಫ್ ಬಯೋಟೆಕ್ನಾಲಾಜಿಯ ಹಿರಿಯ ವಿಜ್ಞಾನಿ ಡಾ. ರೂಬಿ ಜಾನ್ ಅಂಟೊ ಮತ್ತು ಆಕೆಯ ವಿದ್ಯಾರ್ಥಿ ಡಾ. ಲಕ್ಷ್ಮಿ ಆರ್ ನಾಥ್, ಗಣಿಕೆ ಸೊಪ್ಪಿನಲ್ಲಿರುವ ಔಷಧ ಅಂಶ ಉಟ್ರೋಸೈಡ್-ಬಿನ್ನು ಕಂಡುಹಿಡಿದಿದ್ದಾರೆ.ಪ್ರಸ್ತುತ ಪಿತ್ತಕೋಶ ಕ್ಯಾನ್ಸರ್ ಗಾಗಿ ಮಾತ್ರ ಈ ಔಷಧ ಬಳಸಲು ಎಫ್ ಡಿಎ ಅನುಮೋದನೆ ನೀಡಿದೆ. ನಾವು ಅಭಿವೃದ್ಧಿಪಡಿಸಿದ ಸಂಯುಕ್ತದಲ್ಲಿ ಒಂದಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಪಿತ್ತಕೋಶ ಕ್ಯಾನ್ಸರ್ ಸೇರಿದಂತೆ ಪಿತ್ತಕೋಶ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಂಶೋಧನೆಯು ಪ್ರಮುಖ ಪ್ರಗತಿಯಾಗಿದೆ ಎಂದು ಆರ್ ಜಿ ಸಿಬಿ ನಿರ್ದೇಶಕ ಡಾ. ಚಂದ್ರಬಾಸ್ ನಾರಾಯಣ ಹೇಳಿದ್ದಾರೆ. ಪಿತ್ತಕೋಶ ಕಾಯಿಲೆಯಿಂದ ವಾರ್ಷಿಕವಾಗಿ ಅಂದಾಜು 8 ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಿದ್ದು, ಪ್ರತಿ ವರ್ಷ 9 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.