ಅಗರ್ತಲಾ: ತ್ರಿಪುರಾದ ಇತ್ತೀಚಿನ ಹಿಂಸಾಚಾರದ ಘಟನೆಗಳನ್ನು ವರದಿ ಮಾಡುತ್ತಿರುವ ಪತ್ರಕರ್ತೆ ಸಮೃದ್ಧಿ ಸಕುನಿಯಾ ಮತ್ತು ಸ್ವರ್ಣಾ ಝಾ ಅವರ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ದೂರಿನ ಮೇಲೆ ಶನಿವಾರ ತ್ರಿಪುರಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಉನಕೋಟಿ ಜಿಲ್ಲೆಯ ಫಾಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಎಫ್‌ಐಆರ್ ಪ್ರತಿಯನ್ನು ನೀಡಲು ಬಂದ ಪೊಲೀಸರು ತಮ್ಮನ್ನು ಬೆದರಿಸಿದ್ದಾರೆಂದು ಪತ್ರಕರ್ತೆಯರಿಬ್ಬರು ಆರೋಪಿಸಿದ್ದಾರೆ. ಸ್ವತಂತ್ರ ಸುದ್ದಿ ವೆಬ್‌ಸೈಟ್ @hwnewsnetwork ದೆಹಲಿ ಮೂಲದ ವರದಿಗಾರರಾದ 21 ವರ್ಷದ ಸಮೃದ್ಧಿ ಸಕುನಿಯಾ ಮತ್ತು 25 ವರ್ಷದ ಸ್ವರ್ಣ ಝಾ ವಿರುದ್ಧ ಭಾರತೀಯ ದಂಡ ಸಂಹಿತೆಯ 120B (ಕ್ರಿಮಿನಲ್ ಪಿತೂರಿ), 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 504 ಸೆಕ್ಷನ್ ಅಡಿಗಳಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 13 ರಂದು ಫಾಟಿಕ್ರೋಯ್‌ನಲ್ಲಿರುವ ಮುಸ್ಲಿಂ ಮನೆಗಳಿಗೆ ಭೇಟಿ ನೀಡಿದಾಗ ಇಬ್ಬರು ಪತ್ರಕರ್ತರು "ಹಿಂದೂಗಳು ಮತ್ತು ತ್ರಿಪುರಾ ಸರ್ಕಾರದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ" ಎಂದು ಆರೋಪಿಸಿ ಕಾಂಚನ್ ದಾಸ್ ಎಂಬವರು ದೂರು ದಾಖಲಿಸಿದ್ದಾರೆ.
ಆದರೆ ಪೊಲೀಸರ ತಂಡವು ಅವರಿಗೆ ನೋಟೀಸ್ ಅನ್ನು ಮಾತ್ರ ನೀಡಿತು. ನಂತರ ಅವರನ್ನು ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡಿದೆ ಎಂದು ಪೊಲೀಸ್ ಮೂಲಗಳು ಹೇಳಿಕೊಂಡಿವೆ. "ಎಫ್‌ಐಆರ್ ಆಧರಿಸಿ ನಾವು ಇಂದು ತ್ರಿಪುರಾದ ಉತ್ತರ ಜಿಲ್ಲೆಯ ಧರ್ಮನಗರ ಉಪವಿಭಾಗದ ಹೋಟೆಲ್‌ನಲ್ಲಿ ತಂಗಿದ್ದ ಪತ್ರಕರ್ತರನ್ನು ಭೇಟಿ ಮಾಡಲು ಹೋಗಿದ್ದೆವು. ಅಲ್ಲಿ ಅವರ ಅನುಮತಿಯನ್ನು ತೆಗೆದುಕೊಂಡು ಅವರೊಂದಿಗೆ ಮಾತನಾಡಿದ್ದೇವೆ. ಅವರಿಗೆ ನೋಟಿಸ್ ನೀಡಿದ್ದೇವೆ. ಅವರು ಸ್ವಲ್ಪ ಸಮಯ ನೀಡುವಂತೆ ನಮ್ಮನ್ನು ವಿನಂತಿಸಿದರು. ತಮ್ಮ ವಕೀಲರೊಂದಿಗೆ ಹಾಜರಾಗಬಹುದೇ ಎಂದು ಕೇಳಿದರು. ಅದಕ್ಕೆ ಅನುಮತಿಯನ್ನು ನೀಡಲಾಗಿದೆ. ಅವರು ಈಗಾಗಲೇ ತೊರೆದಿದ್ದಾರೆ ಎಂದು ನಾನು ನಂಬುತ್ತೇನೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಸಕುನಿಯಾ ಇಂದು ಬೆಳಿಗ್ಗೆ "ನಾವು ರಾಜಧಾನಿ ಅಗರ್ತಲಾಗೆ ಹೊರಡಬೇಕಿತ್ತು ಆದರೆ ಸಂಪೂರ್ಣ ಸಹಕಾರದ ಹೊರತಾಗಿಯೂ ನಾವು ತೆರಳಲು ಅವಕಾಶ ನೀಡಲಿಲ್ಲ. ನಮ್ಮ ಹೋಟೆಲ್ ಹೊರಗೆ ಸುಮಾರು 16-17 ಪೊಲೀಸರನ್ನು ನಿಯೋಜಿಸಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪೊಲೀಸರು ನಿನ್ನೆ ರಾತ್ರಿ 10:30 ರ ಸುಮಾರಿಗೆ ಹೋಟೆಲ್‌ಗೆ ಬಂದರು ಮತ್ತು ಬೆಳಿಗ್ಗೆ 5:30 ಕ್ಕೆ ಎಫ್‌ಐಆರ್ ಪ್ರತಿಯನ್ನು ಸಲ್ಲಿಸಿದರು. ನಾವು ರಾಜಧಾನಿ ಅಗರ್ತಲಾಗೆ ಹೊರಡಬೇಕಿತ್ತು ಆದರೆ ಸಂಪೂರ್ಣ ಸಹಕಾರದ ಹೊರತಾಗಿಯೂ ನಮಗೆ ತೆರಳಲು ಅವಕಾಶ ನೀಡಲಿಲ್ಲ. ನಮ್ಮ ಹೋಟೆಲ್ ಹೊರಗೆ ಸುಮಾರು 16-17 ಪೊಲೀಸರನ್ನು ನಿಯೋಜಿಸಲಾಗಿದೆ. "ತ್ರಿಪುರಾ ಕಥೆಯನ್ನು ಕವರ್ ಮಾಡುವಾಗ ನಾನು ಎದುರಿಸಿದ ಎಲ್ಲಾ ಬೆದರಿಕೆಗಳನ್ನು ಶೀಘ್ರದಲ್ಲೇ ಪುನರಾವರ್ತಿಸುತ್ತೇನೆ. ಈ ಮಧ್ಯೆ, ನಾವು ಕಾನೂನು ಪರಿಹಾರವನ್ನು ಹುಡುಕುತ್ತಿದ್ದೇವೆ. ನಮ್ಮ ಹೋಟೆಲ್‌ನಿಂದ ಹೊರಗೆ ಹೋಗಲು ನಮಗೆ ಅನುಮತಿ ಇಲ್ಲ" ಎಂದು ಪರ್ತಕರ್ತೆ ಟ್ವೀಟ್ ಮಾಡಿದ್ದಾರೆ. ಪತ್ರಕರ್ತೆ ಸಕುನಿಯಾ, ಅಕ್ಟೋಬರ್ 24 ರಂದು ಉನಕೋಟಿಯ ಪೌಲ್ ಬಜಾರ್‌ನಲ್ಲಿ ಮಸೀದಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಚ್‌ಪಿ ಮತ್ತು ಬಜರಂಗದಳ ಸಂಘಟನೆ ಹೆಸರನ್ನು ಸೇರಿಸಿದ್ದಾರೆ. ಇದು ತ್ರಿಪುರಾದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡುವ "ಅಪರಾಧದ ಪಿತೂರಿ"ಯ ಭಾಗವಾಗಿದೆ ಎಂದು ದಾಸ್ ಆರೋಪಿಸಿದ್ದಾರೆ. ಈ ಬಗ್ಗೆ ಪತ್ರಕರ್ತೆಯರಿಬ್ಬರೂ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಎಫ್‌ಐಆರ್ ಪ್ರತಿಗಳನ್ನು ಫೋಸ್ಟ್ ಮಾಡಿ, ನಮ್ಮ ಮೇಲೆ ಎಫ್‌ಐಆರ್ ದಾಖಲಾಗಿದೆ. ನಮ್ಮನ್ನು ಹೋಟೆಲ್‌ನಿಂದ ಹೊರ ಹೋಗಲು ಪೊಲೀಸರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.ಸಕುನಿಯಾ ಮತ್ತು ಝಾ ಅವರು ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಮಸೀದಿಯ ಬಗ್ಗೆ ನವೆಂಬರ್ 12 ರಂದು ವರದಿ ಮಾಡಿದ್ದರು. ಶನಿವಾರ ಇಬ್ಬರು ವರದಿಗಾರರು ಇಲ್ಲಿ ಇನ್ನೊಂದು ಮಸೀದಿ ಮತ್ತು ಮುಸ್ಲಿಮರ ಮನೆಗಳಿಗೆ ಹಾನಿಯಾಗಿರುವದನ್ನು ವರದಿ ಮಾಡಲು ಧರ್ಮನಗರಕ್ಕೆ ಬಂದಿದ್ದರು. ತ್ರಿಪುರಾದಲ್ಲಿ ಅಕ್ಟೋಬರ್ 26 ರಂದು ನಡೆದ ವಿಎಚ್‌ಪಿ ರ್‍ಯಾಲಿ ಬಳಿಕ ಹಿಂಸಾಚಾರ ಆರಂಭವಾಗಿದೆ. ಆದರೆ, ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ಮಸೀದಿಯನ್ನು ಧ್ವಂಸ ಮಾಡಿರುವ ವರದಿಗಳನ್ನು ಗೃಹ ಸಚಿವಾಲಯ ತಳ್ಳಿಹಾಕಿದೆ. "ತ್ರಿಪುರಾದ ಗೋಮತಿ ಜಿಲ್ಲೆಯ ಕಕ್ರಾಬನ್ ಪ್ರದೇಶದಲ್ಲಿ ಮಸೀದಿಯನ್ನು ಹಾನಿಗೊಳಿಸಲಾಗಿದೆ ಮತ್ತು ಧ್ವಂಸಗೊಳಿಸಲಾಗಿದೆ ಎಂದು ವರದಿ ಪ್ರಸಾರವಾಗಿವೆ. ಈ ಸುದ್ದಿಗಳು ನಕಲಿ ಮತ್ತು ಸಂಪೂರ್ಣ ಸುಳ್ಳು" ಎಂದಿದೆ. ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ, ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ನಕಲಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡಿದ ಆರೋಪದಲ್ಲಿ ನೂರಕ್ಕೂ ಹೆಚ್ಚು ಖಾತೆಗಳ ವಿವರಗಳನ್ನು ನೀಡುವಂತೆ ಪೊಲೀಸರು ಜಾಲತಾಣಗಳಿಗೆ ನೋಟಿಸ್ ನೀಡಿದ್ದಾರೆ.