HEALTH TIPS

ದೇಶದ ಆರ್ಥಿಕತೆಗೆ ಸವಾಲು ಹಾಕುತ್ತಿರುವ ಬಿಟ್ ಕಾಯಿನ್

              ಈ ಹಿಂದೆಲ್ಲ ಕೆಲವು 'ಬ್ಲೇಡ್ ಕಂಪೆನಿಗಳು' ಜನರಿಗೆ ಅಪಾರ ಹಣದ ಆಮಿಷವನ್ನು ತೋರಿಸಿ, ಅವರಿಂದ ದುಡ್ಡು ಸಂಗ್ರಹಿಸಿ ರಾತ್ರೋ ರಾತ್ರಿ ಮಾಯವಾಗಿ ಬಿಡುತ್ತಿದ್ದವು.

              ಅತಿ ಕಡಿಮೆ ಅವಧಿಯಲ್ಲಿ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಗಳಿಸುವ ದುರಾಸೆಯ ಹಿಂದೆ ಬಿದ್ದು ಜನಸಾಮಾನ್ಯರು ಕೋಟ್ಯಂತರ ರೂಪಾಯಿ ಕಳೆದುಕೊಂಡದ್ದಿದೆ. ತಮ್ಮ ನಿವೃತ್ತಿ ವೇತನವನ್ನೂ ಅದರಲ್ಲಿ ತೊಡಗಿಸಿ ಬೀದಿಗೆ ಬಿದ್ದವರಿದ್ದಾರೆ. 'ಹಲಾಲ್ ಬ್ಯಾಂಕಿಂಗ್'ನ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯದ ನೂರಾರು ಜನರಿಗೆ ವಂಚನೆಯಾಗಿರುವ ಪ್ರಕರಣವನ್ನು ಕರ್ನಾಟಕದಲ್ಲೇ ಕಂಡಿದ್ದೇವೆ. ಇದರಲ್ಲಿ ಹಲವು ಮುಸ್ಲಿಮ್ ಸಮುದಾಯದ ರಾಜಕೀಯ ಮುಖಂಡರೇ ಭಾಗಿಯಾಗಿರುವುದು, ಅವರ ಮೇಲೆ ಪ್ರಕರಣಗಳು ದಾಖಲಾಗಿರುವುದು ಇತಿಹಾಸ. ನೋಟು ನಿಷೇಧದ ಬಳಿಕವಂತೂ, ಬ್ಯಾಂಕ್‌ನಲ್ಲಿ ದುಡ್ಡು ಇಡುವುದೇ ಒಂದು ದೊಡ್ಡ ಜೂಜಾಟವಾಗಿದೆ. ಜನಸಾಮಾನ್ಯರಿಗೆ ತಾವೆಲ್ಲಿ, ಹೇಗೆ ದುಡ್ಡು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದೇ ಅರಿವಿಗೆ ಬರದಂತೆ ಜನರ ಜೇಬನ್ನು ಬ್ಯಾಂಕುಗಳು ಕತ್ತರಿಸುತ್ತಿವೆ.

             ಡಿಜಿಟಲ್ ಬ್ಯಾಂಕಿಂಗ್, ಜನರ ಕೈಯಲ್ಲಿ ನಗದು ಇಲ್ಲದೆಯೇ ವ್ಯವಹಾರಕ್ಕೆ ಆಹ್ವಾನಿಸುತ್ತಿದೆ. ಇದೇ ಸಂದರ್ಭದಲ್ಲಿ, ನೇರವಾಗಿ ಬ್ಯಾಂಕ್ ಖಾತೆದಾರರ ಠೇವಣಿಗಳಿಗೆ ಕನ್ನ ಹಾಕುವ ಹ್ಯಾಕರ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿಂದೆಲ್ಲ, ಬ್ಯಾಂಕ್ ದರೋಡೆ ಎಂದರೆ ಸುಲಭವಿರಲಿಲ್ಲ. ಬ್ಯಾಂಕ್‌ನ ಬೀಗ ಮುರಿದು, ಬಳಿಕ ಎಲ್ಲ ಭದ್ರತೆಗಳನ್ನು ವಿಫಲಗೊಳಿಸಿ, ತಿಜೋರಿಗೆ ಕಳ್ಳರು ಕೈ ಹಾಕಬೇಕಾಗಿತ್ತು. ಯಾವುದೇ ಸುಳಿವುಗಳನ್ನು ಉಳಿಸದೆ ಅಲ್ಲಿಂದ ಪಾರಾಗಬೇಕಾಗಿತ್ತು. ಈಗ ಹಾಗಲ್ಲ. ಯಾವುದೋ ಒಬ್ಬ ಅಮಾಯಕ ಠೇವಣಿದಾರನ ಖಾತೆಗೆ, ಸಾವಿರಾರು ಕಿಲೋಮೀಟರ್ ದೂರದಲ್ಲಿ ಕೂತು ದರೋಡೆಕೋರ ಡಿಜಿಟಲ್ ದೌರ್ಬಲ್ಯಗಳನ್ನು ಬಳಸಿಕೊಂಡೇ ಕನ್ನ ಹಾಕಬಲ್ಲ. ಈ ಹಿಂದೆ ದರೋಡೆ ನಡೆದರೆ ಬ್ಯಾಂಕ್ ಅದರ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿತ್ತು. ಡಿಜಿಟಲ್ ಹ್ಯಾಕರ್‌ಗಳು ಹುಟ್ಟಿಕೊಂಡ ದಿನಗಳಿಂದ, ತಮ್ಮ ತಮ್ಮ ಖಾತೆಗೆ ಖಾತೆದಾರರೇ ಹೊಣೆಗಾರರು ಎಂದು ಬ್ಯಾಂಕುಗಳೂ ಕೈಯೆತ್ತಿವೆ. ಸುಲಭದಲ್ಲಿ ಹಣ ಸಂಪಾದಿಸುವ ತಂತ್ರಗಳು ಈ ಡಿಜಿಟಲ್ ಯುಗದಲ್ಲಿ ವಿಚಿತ್ರ ರೂಪ ಪಡೆಯುತ್ತಿವೆ. ಇದೀಗ ನಮ್ಮ ಕರೆನ್ಸಿಗಳಿಗೆ ಪರ್ಯಾಯ ಕರೆನ್ಸಿಗಳೂ ಹುಟ್ಟಿಕೊಂಡಿವೆ. ಭವಿಷ್ಯದಲ್ಲಿ ಈ ಕರೆನ್ಸಿಗಳು ನಮಗೆ ಅಪಾರ ಲಾಭ ತಂದುಕೊಡುತ್ತವೆ ಎನ್ನುವ ಭ್ರಮೆಗಳನ್ನು ಬಿತ್ತಿ, ಮಧ್ಯಮ, ಮೇಲ್‌ಮಧ್ಯಮ ಮಾತ್ರವಲ್ಲ, ಶ್ರೀಮಂತ ವರ್ಗಗಳನ್ನೂ ಮೋಸ ಮಾಡುವ ಜನರು ಹುಟ್ಟಿಕೊಂಡಿದ್ದಾರೆ. ಅಂತಹ ದರೋಡೆಗಳ ಸಾಲುಗಳಲ್ಲಿ ಇದೀಗ 'ಬಿಟ್ ಕಾಯಿನ್' ದಂಧೆ ಸುದ್ದಿ ಮಾಡುತ್ತಿದೆ. ಈ ದಂಧೆಯಲ್ಲಿ ರಾಜಕಾರಣಿಗಳು, ಬೃಹತ್ ಉದ್ಯಮಿಗಳು ಭಾಗಿದಾರರಾಗಿ ಸುದ್ದಿಯಲ್ಲಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದ ಈ ಜಾಲ, ಇದೀಗ ಕರ್ನಾಟಕದಲ್ಲೂ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ಬಗ್ಗೆ ರಾಜಕಾರಣಿಗಳು ಪರಸ್ಪರ ಕೆಸರೆರಚಿಕೊಳ್ಳುತ್ತಿದ್ದಾರೆ. ಆದರೆ ಯಾರಿಗೂ ಇದು ಗಂಭೀರವಾಗಿ, ಸ್ವತಂತ್ರವಾಗಿ ತನಿಖೆಯಾಗುವುದು ಬೇಕಾಗಿಲ್ಲ. ಯಾಕೆಂದರೆ, ಈ ದಂಧೆಯಲ್ಲಿ ಒಂದು ನಿರ್ದಿಷ್ಟ ಪಕ್ಷದವರು ಮಾತ್ರ ಒಳಗೊಂಡಿರುವುದಲ್ಲ. ಹಲವು ಪಕ್ಷಗಳಿಗೆ ಸೇರಿದ ದುಡ್ಡಿನ ಕುಳಗಳ ಹೆಸರುಗಳು ಇದರೊಳಗೆ ಹರಿದಾಡುತ್ತಿವೆ.

                 ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಲವು ಲಕ್ಷ ಕೋಟಿ ವ್ಯವಹಾರಗಳುಳ್ಳ ಕ್ರಿಪ್ಟೋ ಕರೆನ್ಸಿಗಳಲ್ಲಿ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸುದ್ದಿ ಮಾಡುತ್ತಿರುವುದು ಬಿಟ್ ಕಾಯಿನ್. ದೇಶದ ಅಧಿಕೃತ ಮಾನ್ಯತೆಯನ್ನು ಈ ಕರೆನ್ಸಿ ಹೊಂದಿಲ್ಲ . ಆದರೆ ಈ ಬಿಟ್ ಕಾಯಿನ್ ದಂಧೆಯಲ್ಲಿ ಈ ದೇಶದ ರಾಜಕೀಯ ಪ್ರಮುಖರೇ ಭಾಗಿಯಾಗಿರುವುದರಿಂದ ಇದು ಪರೋಕ್ಷ ಮಾನ್ಯತೆಯನ್ನು ತನ್ನದಾಗಿಸಿಕೊಂಡಿದೆ. ಗಣ್ಯರ ಭಾಗೀ ದಾರಿಕೆ ಮತ್ತು ಶಿಫಾರಸುಗಳೇ ಇವುಗಳಿಗೆ ಮಾನ್ಯತೆಯಾಗಿ ಪರಿಗಣಿಸಲ್ಪಡುತ್ತಿದೆ. ನೋಟು ನಿಷೇಧದ ಬಳಿಕ ಪ್ರಚಲಿತದಲ್ಲಿರುವ ಡಿಜಿಟಲ್ ಕರೆನ್ಸಿ ಇದಕ್ಕೆ ಇನ್ನಷ್ಟು ಪೂರಕ ವಾತಾವರಣವನ್ನು ತಂದುಕೊಟ್ಟಿವೆ. ಭವಿಷ್ಯದಲ್ಲಿ ಈ ಕರೆನ್ಸಿ ಹಲವು ಪಟ್ಟು ಲಾಭಗಳನ್ನು ತಂದುಕೊಡಲಿದೆ ಎಂದು ಜನಸಾಮಾನ್ಯರಿಂದ ಲಕ್ಷಾಂತರ ರೂಪಾಯಿ ದೋಚುತ್ತಿರುವ ಕೃತ್ಯಗಳು ಗುಟ್ಟಾಗಿ ನಡೆಯುತ್ತಿವೆ. ವಿಪರ್ಯಾಸವೆಂದರೆ, ಬಿಟ್ ಕಾಯಿನ್‌ನಲ್ಲಿ ಮೋಸ ಹೋದವರು ಇದರ ಬಗ್ಗೆ ಬಾಯಿ ತೆರೆಯುವಂತಹ ಅವಕಾಶವೂ ಇಲ್ಲದಂತಾಗಿದೆ. ರಾಜಕಾರಣಿಗಳು ಇದರಲ್ಲಿ ಭಾಗೀದಾರರಾಗಿರುವುದರಿಂದ, ಹಗರಣಗಳು ಸುಲಭದಲ್ಲಿ ಬೆಳಕಿಗೆ ಬರುವುದೂ ಇಲ್ಲ. ದುಷ್ಕರ್ಮಿಗಳನ್ನು ಬಂಧಿಸುವ ಸಂದರ್ಭದಲ್ಲಿ ರಾಜಕಾರಣಿಗಳ ಹೆಸರುಗಳೂ ಬಹಿರಂಗವಾಗಬಹುದಾದುದರಿಂದ, ಮೋಸ ಹೋದವರ ವೌನವೇ ಈ ಕರೆನ್ಸಿಯ ಬಹುದೊಡ್ಡ ಬಂಡವಾಳವಾಗಿದೆ.

              ಆರ್ಥಿಕವಾಗಿ ಸಂಪೂರ್ಣವಾಗಿ ಕುಸಿದು ಕೂತಿರುವ ಭಾರತದ ಮಟ್ಟಿಗೆ, ಈ ಕರೆನ್ಸಿ ಅತ್ಯಂತ ಅಪಾಯಕಾರಿಯಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಭಾರೀ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಅಳಿದುಳಿದ ರೂಪಾಯಿಯ ಘನತೆಯನ್ನೂ ಪಾತಾಳಕ್ಕೆ ತಳ್ಳುವ ಶಕ್ತಿಯಿದೆ. ಸದ್ಯದ ವಾತಾವರಣದಲ್ಲಿ ಯಾವುದೇ ಉದ್ದಿಮೆಗಳಿಗೆ ಬಂಡವಾಳ ಹೂಡುವ ಪರಿಸ್ಥಿತಿ ಇಲ್ಲವಾದುದರಿಂದ, ಸುಲಭದಲ್ಲಿ ಹಣ ಸಂಪಾದಿಸಲು ಕೈಯಲ್ಲಿರುವ ಹಣವನ್ನು ಬಿಟ್‌ಕಾಯಿನ್‌ಗಳಿಗೆ ಹೂಡಿದವರ ಸಂಖ್ಯೆ ಬಹುದೊಡ್ಡದಿದೆ. ಹಾಗೆಯೇ ಮೋಸ ಮಾಡಿದವರು, ಮೋಸ ಹೋದವರ ಸಂಖ್ಯೆಯೂ ಬೆಳೆಯುತ್ತಲೇ ಇವೆೆ. ಕರ್ನಾಟಕದಲ್ಲಿ ಈ ಬಿಟ್ ಕಾಯಿನ್ ವ್ಯವಹಾರದಲ್ಲಿ ಆಡಳಿತ ಪಕ್ಷದಲ್ಲಿರುವ ರಾಜಕಾರಣಿಗಳು ಭಾಗಿಯಾಗಿರುವುದು, ಮಧ್ಯವರ್ತಿಗಳ ಮೋಸದ ವ್ಯವಹಾರಗಳಲ್ಲಿ ರಾಜಕಾರಣಿಗಳ ಹೆಸರು ಕೇಳಿ ಬರುತ್ತಿರುವುದು ಆತಂಕಕಾರಿಯಾಗಿದೆ. ಎಲ್ಲಕ್ಕಿಂತ ಅಪಾಯಕಾರಿಯಾಗಿರುವ ಸಂಗತಿಯೆಂದರೆ, ಈ ಬಿಟ್‌ಕಾಯಿನ್ ದಂಧೆಯಲ್ಲಿ ಡ್ರಗ್ಸ್ ಮತ್ತು ಡಿಜಿಟಲ್ ಹ್ಯಾಕರ್ಸ್‌ಗಳ ಹೆಸರುಗಳು ಕೇಳಿ ಬರುತ್ತಿರುವುದು. ಬಿಟ್‌ಕಾಯಿನ್ ಕೇವಲ ಹಣದ ವ್ಯವಹಾರವಾಗಿ ಮಾತ್ರ ಉಳಿದಿಲ್ಲ.

              ಡ್ರಗ್ಸ್ ದಂಧೆಕೋರರು, ಹ್ಯಾಕರ್ಸ್‌ಗಳು, ಅಂತರ್‌ರಾಷ್ಟ್ರೀಯ ಕುಖ್ಯಾತಿಯುಳ್ಳ ಪಾತಕಿಗಳು, ಬ್ಲಾಕ್‌ಮೇಲ್ ನಡೆಸುವವರು ಇದರಲ್ಲಿ ಸೇರಿಕೊಂಡಿದ್ದಾರೆ ಎನ್ನುವ ಮಾತುಗಳಿವೆ. ಕಪ್ಪು ಹಣಗಳು ಬಿಳಿಯಾಗುತ್ತಿವೆ. ನರೇಂದ್ರ ಮೋದಿಯ ನೋಟು ನಿಷೇಧವನ್ನು ಅಣಕಿಸುವಂತೆ, ಕಪ್ಪು ಹಣಗಳು ದೊಡ್ಡ ಮಟ್ಟದಲ್ಲಿ ಹೂಡಿಕೆಯಾಗಲು ಬಿಟ್ ಕಾಯಿನ್‌ನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳಿವೆ. ಬಿಟ್‌ಕಾಯಿನ್ ಮೂಲಕ ಸುಲಭವಾಗಿ ಹಣ ಸಂಪಾದಿಸುವ ಭ್ರಮೆಯಿಂದ ಮಧ್ಯಮವರ್ಗದ ನೂರಾರು ಮಂದಿ ಹಣ ಕಳೆದುಕೊಂಡಿದ್ದಾರೆ. ಯಾರ ವಿರುದ್ಧ ದೂರು ಸಲ್ಲಿಸಬೇಕು ಎನ್ನುವುದು ಗೊತ್ತಾಗದೇ, ಅತಂತ್ರರಾಗಿ ಬೀದಿಯಲ್ಲಿ ನಿಂತಿದ್ದಾರೆ. ಇಂದು ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿ ಗಂಭೀರ ತನಿಖೆ ಅಗತ್ಯವಿದೆ . ಇದು ಒಂದು ನಿರ್ದಿಷ್ಟ ಪಕ್ಷ, ಸರಕಾರದ ವಿರುದ್ಧ ನಡೆಸುವ ತನಿಖೆಯಾಗಬೇಕಾಗಿಲ್ಲ. ಯಾಕೆಂದರೆ, ಬಿಟ್‌ಕಾಯಿನ್‌ನಲ್ಲಿ ಭಾಗಿಯಾದವರಿಗೆ ಪಕ್ಷವಿಲ್ಲ. ಧರ್ಮವೂ ಇಲ್ಲ. 'ಹಣ ಸಂಪಾದನೆ'ಯೇ ಅವರ ಪಕ್ಷ ಮತ್ತು ಧರ್ಮ. ಆದುದರಿಂದ ಈ ತನಿಖೆ ಪಾರದರ್ಶಕವಾಗಿ ನಡೆಯಬೇಕು. ಎಲ್ಲ ಪಕ್ಷದೊಳಗಿರುವ ಕಾಳ ಮುಖಗಳೂ ತನಿಖೆಯಿಂದ ಹೊರಗೆ ಬರಬೇಕು. ಸರಕಾರ ಬಿಟ್‌ಕಾಯಿನ್ ಹಗರಣದ ವಿರುದ್ಧ ನಿರ್ಲಕ್ಷ ವಹಿಸಿದರೆ ಈ ಹಗರಣ ದೇಶದ ಆರ್ಥಿಕತೆಯ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆಯಾಗುವ ಸಾಧ್ಯತೆಗಳಿವೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries