ಪಾಲಕ್ಕಾಡ್: ಪಾಲಕ್ಕಾಡ್ ಮಂಬರತ್ ನಿವಾಸಿ, ಆರೆಸ್ಸೆಸ್ ಕಾರ್ಯಕರ್ತ ಸಂಜಿತ್(27)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಬ್ಬ ಪೋಯುಲರ್ ಫ್ರಂಟ್ ಕಾರ್ಯಕರ್ತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೃತ್ಯದಲ್ಲಿ ಈತ ಖುದ್ದು ಶಾಮೀಲಾಗಿದ್ದು, ತನಿಖೆ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಸಂಜಿತ್ ಅವರನ್ನು ನ. 15ರಂದು ಹಾಡಹಗಲು ತಂಡವೊಂದು ಮಾರಕಾಯುಧಗಳೊಂದಿಗೆ ಬರ್ಬರವಾಗಿ ಕೊಚ್ಚಿ ಕೊಲೆಗೈದಿದೆ. ಎಲಪ್ಪಳ್ಳಿ ಮಂಡಲ ಆರೆಸ್ಸೆಸ್ ಬೌದ್ಧಿಕ್ ಪ್ರಮುಖ್ ಆಗಿದ್ದ ಸಂಜಿತ್ ಅವರು ಪತ್ನಿ ಮನೆಯಿಂದ ವಾಪಸಾಗುತ್ತಿದ್ದ ಸಂದರ್ಭ ಕಾರಿನಲ್ಲಿ ಹಿಂಬಾಲಿಸಿ ಬಂದ ತಂಡ, ಸಂಜಿತ್ ಹಾಗೂ ಇವರ ಪತ್ನಿ ಸಂಚರಿಸುತ್ತಿದ್ದ ಬೈಕ್‍ಗೆ ಡಿಕ್ಕಿಯಾಗಿಸಿ ರಸ್ತೆಗೆ ಬೀಳುವಂತೆ ಮಾಡಿದ್ದರು. ಜನರು ನಿಂತು ನೋಡುತ್ತಿದ್ದಂತೆ ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಕೃತ್ಯದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಶಾಮೀಲಾಗಿರುವ ಬಗ್ಗೆ ಬಿಜೆಪಿ ಆರೋಪಿಸಿತ್ತು. ಹಾಡಹಗಲು ಕೊಲೆಕೃತ್ಯ ನಡೆದಿದ್ದರೂ, ಆರೋಪಿಗಳ ಬಂಧನ ವಿಳಂಬವಾಗುತ್ತಿದ್ದ ಬಗ್ಗೆ ಹಿಂದೂಪರ ಸಂಘಟನೆಗಳು ಪ್ರತಿಭಟನೆಯನ್ನೂ ಹಮ್ಮಿಕೊಂಡಿತ್ತು. ಕೊಲೆಕೃತ್ಯ ಹಾಗೂ ಆರೋಪಿಗಳ ಬಂಧನ ವಿಳಂಬ ಖಂಡಿಸಿ ದೆಹಲಿಯಲ್ಲೂ ಪ್ರತಿಭಟನೆ ನಡೆಸಲಾಗಿತ್ತು.