ನವದೆಹಲಿ :ಕರ್ತಾರ್ ಪುರ ಸಾಹಿಬ್ ಭೇಟಿ ವೇಳೆ ಇಮ್ರಾನ್ ಖಾನ್ ನ್ನು ಆತ ನನ್ನ ಹಿರಿಯ ಸಹೋದರ ಎಂದು ಹೇಳಿದ್ದ ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದೆ.
ವಿಪಕ್ಷ ಕಾಂಗ್ರೆಸ್ ಹಿಂದುತ್ವದಲ್ಲಿ ಬೊಕೊ ಹರಾಮ್ ಹಾಗೂ ಇಸ್ಲಾಮಿಕ್ ಸ್ಟೇಟ್ ನ್ನು ನೋಡುತ್ತದೆ ಹಾಗೂ ಖಾನ್ ನಲ್ಲಿ ಭಾಯಿ ಜಾನ್ ನ್ನು ಕಾಣುತ್ತದೆ ಎಂದು ಬಿಜೆಪಿ ಸಿಧು ವಿರುದ್ಧ ವಾಗ್ದಾಳಿ ನಡೆಸಿದೆ.
ಇಮ್ರಾನ್ ಖಾನ್ ಪರವಾಗಿ ಪಾಕಿಸ್ತಾನದ ಅಧಿಕಾರಿಗಳು ಸಿಧು ಅವರನ್ನು ಸ್ವಾಗತಿಸಿದ್ದ ವಿಡಿಯೋ ವೈರಲ್ ಆಗತೊಡಗಿತ್ತು. ಈ ವಿಡಿಯೋದಲ್ಲಿ ಮಾತನಾಡಿದ್ದ ಸಿಧು, ಇಮ್ರಾನ್ ಖಾನ್ ನನ್ನ ಹಿರಿಯ ಸಹೋದರನಿದ್ದಂತೆ, ಆತನನ್ನು ಬಹಳ ಇಷ್ಟಪಡುತ್ತೇನೆ ಎಂದು ಹೇಳಿದ್ದ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಸಿಧು ಅವರ ನಡೆ ಭಾರತೀಯರಿಗೆ ಕಳವಳದ ಅಂಶವಾಗಿದೆ ಎಂದು ಹೇಳಿದ್ದಾರೆ. ಬಹುದೊಡ್ಡ ಯೋಜನೆ ಪ್ರಗತಿಯಲ್ಲಿದೆ, ಸಿಧು ಅವರ ಹೇಳಿಕೆಗೂ ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರು ಹಿಂದುತ್ವವವನ್ನು ಟೀಕಿಸುತ್ತಿರುವುದಕ್ಕೂ ಸಂಬಂಧವಿದೆ ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ.