ಅಹಮದಾಬಾದ್: ಪಾಕಿಸ್ತಾನಿ ನೌಕಾಪಡೆ ಮತ್ತೊಂದು ನೀಚ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಭಾರತಕ್ಕೆ ಸೇರಿದ್ದ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕ್ ನೌಕಾ ಸೇನೆಯಿಂದ ನಡೆದ ಈ ಫೈರಿಂಗ್ ನಲ್ಲಿ ಓರ್ವ ಮೀನುಗಾರ ಸಾವಿಗೀಡಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.
ಗುಜರಾತ್ ನ ದ್ವಾರಕಾ ಸಮುದ್ರ ಪ್ರದೇಶದಲ್ಲಿ ಪಾಕ್ ನೌಕಾಪಡೆ ಈ ದುಸ್ಸಾಹಸಕ್ಕೆ ಕೈ ಹಾಕಿದೆ. ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿದ ಭಾರತೀಯ ದೋಣಿಯ ಹೆಸರು 'ಜಲ್ ಪಾರಿ' ಎಂದು ಗೊತ್ತಾಗಿದೆ.
ಮೃತಪಟ್ಟ ವ್ಯಕ್ತಿಯ ದೇಹವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇನ್ನು ಗಾಯಗೊಂಡಿರುವ ವ್ಯಕ್ತಿಯನ್ನು ದ್ವಾರಕಾದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಾಕಿಸ್ತಾನ ನೌಕಾಪಡೆ ದಾಳಿ ನಡೆಸಿದಾಗ ಜಲ್ ಪಾರಿ ದೋಣಿ, ಭಾರತೀಯ ಗಡಿಯೊಳಗೆ ಇತ್ತು. ಆದರೂ ಸಹ ದಾಳಿ ಮಾಡಿದೆ. ಕೇಂದ್ರ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಅನ್ನೋದು ಕಾದು ನೋಡಬೇಕಿದೆ.