ನವದೆಹಲಿ: ಪ್ರಯಾಣಿಕರು ಮತ್ತು ಸಾರ್ವಜನಿಕರ ಪ್ರಯಾಣ ಸಮಸ್ಯೆ ಪರಿಹರಿಸಲು ಕೊನೆಗೂ ಭಾರತೀಯ ರೈಲ್ವೇಯು ಪ್ರಯಾಣ ದರವನ್ನು ಪರಿಷ್ಕರಿಸಿದೆ. ವಿಶೇಷ ರೈಲು ಎಂದು ಕರೆಯಲಾಗುತ್ತಿದ್ದ ರೈಲುಗಳು ಇನ್ನು ಕಡಿಮೆ ದರದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ. ಭಾರತೀಯ ರೈಲ್ವೇ ಶುಕ್ರವಾರ ಮೇಲ್ ಮತ್ತು ಎಕ್ಸ್‍ಪ್ರೆಸ್ ರೈಲುಗಳಿಗೆ 'ವಿಶೇಷ' ಟ್ಯಾಗ್ ಅನ್ನು ರದ್ದುಗೊಳಿಸುವಂತೆ ಮತ್ತು ತಕ್ಷಣವೇ ಜಾರಿಗೆ ಬರುವಂತೆ ಕೊರೊನಾ ಪೂರ್ವ ಅಸ್ತಿತ್ವದಲ್ಲಿರುವ ಟಿಕೆಟ್ ದರಗಳಿಗೆ ಹಿಂತಿರುಗುವಂತೆ ಆದೇಶಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಸಡಿಲಗೊಂಡಾಗ ರೈಲು ಸೇವೆಯನ್ನು ವಿಶೇಷ ಸೇವೆ ಎಂದು ಮರುನಾಮಕರಣ ಮಾಡಲಾಗಿತ್ತು. ದೂರದ ರೈಲುಗಳು ಮತ್ತು ನಂತರದ ಪ್ರಯಾಣಿಕ ರೈಲುಗಳು ಈ ವಿಶೇಷ ಟ್ಯಾಗ್‍ನೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಟಿಕೆಟ್ ಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದ ಈ ಸೇವೆ ನಿತ್ಯ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಕಷ್ಟಕರವಾಗಿತ್ತು.
ಇದೀಗ ರೈಲ್ವೆ ಮಂಡಳಿಯು ವಲಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ವಿಶೇಷ ಟ್ಯಾಗ್ ಇಲ್ಲದೆ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಕೊರೊನಾ ಪೂರ್ವ ದರಕ್ಕೆ ಬದಲಾಯಿಸಲು ಸೂಚಿಸಿದೆ. ಕೂಡಲೇ ಆದೇಶ ಜಾರಿಯಾಗಬೇಕು ಎಮದು ಹೇಳಲಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಜಾರಿಗೊಳ್ಳಲು ಎರಡು ದಿನ ಬೇಕು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.