ನವದೆಹಲಿ: ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ, ಫ್ರಾನ್ಸ್‌ನ ಡಾಸೊ ಏವಿಯೇಷನ್ ಕಂಪನಿ ಭಾರತದ ಮಧ್ಯವರ್ತಿಯೊಬ್ಬರಿಗೆ ನಕಲಿ ಇನ್‌ವಾಯ್ಸ್ ಬಳಸಿ ₹65 ಕೋಟಿ ಕಮಿಷನ್ ನೀಡಿರುವುದಾಗಿ ಫ್ರಾನ್ಸ್‌ನ 'ಮೀಡಿಯಾಪಾರ್ಟ್ ಪೋರ್ಟಲ್' ವರದಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ - ಬಿಜೆಪಿ ನಡುವೆ ವಾಗ್ಯುದ್ಧ ಆರಂಭವಾಗಿದೆ.
'ಮೀಡಿಯಾ ಪಾರ್ಟ್' ವರದಿ ಬಳಿಕ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಪ್ರತಿ ಹಂತದಲ್ಲೂ ಸತ್ಯವು ನಿಮ್ಮ ಜೊತೆ ಇರುವಾಗ ಭ್ರಷ್ಟ ಕೇಂದ್ರ ಸರ್ಕಾರದ ವಿರುದ್ಧ ಹೋರಾಟವನ್ನು ನಿಲ್ಲಿಸಬೇಡಿ ಹಾಗೂ ಹೋರಾಡಲು ಭಯಪಡಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, 'ಕಾಂಗ್ರೆಸ್ ಪಕ್ಷದ (ಐಎನ್‌ಸಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಹೆಸರನ್ನು 'ಐ ನೀಡ್ ಕಮಿಷನ್' ಎಂದು ಮರು ನಾಮಕರಣ ಮಾಡಬೇಕಿದೆ' ಎಂದು ಲೇವಡಿ ಮಾಡಿದ್ದಾರೆ. 'ತನ್ನ ಅಧಿಕಾರ ಅವಧಿಯಲ್ಲಿ ಮಾತುಕತೆಗಳು ವಿಫಲವಾಗಿ, ಈ ಒಪ್ಪಂದ ಕೈತಪ್ಪಿರುವುದಕ್ಕೆ ಕಾಂಗ್ರೆಸ್‌ಗೆ ಅಸಮಾಧಾನವಿದೆ' ಎಂದು ಆರೋಪಿಸಿದ್ದಾರೆ.
'ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ' ಎಂದು ಅವರು ದೂರಿದ್ದಾರೆ.