ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಹಾಗೂ ಎಣ್ಮಕಜೆ ಗ್ರಂಥಾಲಯ ಒಕ್ಕೂಟ ಸಮಿತಿ ಆಶ್ರಯದಲ್ಲಿ ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ 'ಸಂವಿಧಾನ ಓದು' ಕಾರ್ಯಕ್ರಮವನ್ನು ಕೇರಳ ರಾಜ್ಯ ಲೈಬ್ರೇರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಉದ್ಘಾಟಿಸಿದರು. ಪ್ರಜಾಪ್ರಭುತ್ವ ಜೀವಂತವಾಗಿರಬೇಕಾದರೆ ಸಂವಿಧಾನ ಓದು ಕಾರ್ಯಕ್ರಮ ಪ್ರತಿ ಮನೆ ಮನಗಳಲ್ಲಿ ಕಾರ್ಯರೂಪಗೊಂಡರೆ ಭಾರತದ ಮಹಾಚೇತನ ಡಾ. ಬಿ.ಆರ್ ಅಂಬೇಡ್ಕರರ ಕನಸು ನನಸಾಗುತ್ತದೆ.ಸಂವಿಧಾನ ಇದ್ದರೆ ಸಾಲದು ಅದನ್ನು ಜಾರಿಗೊಳಿಸುವ ಸರ್ಕಾರಬೇಕು ಎಂಬ ಅಂಬೇಡ್ಕರರ ಮಾತುಗಳ ಬಗ್ಗೆ ಭಾರತದ ಪ್ರತಿ ಪೌರರು ಚಿಂತಿಸುವ ಮನೋಭಾವ ಬಂದಾಗ ನೆಮ್ಮದಿಯ ನಾಡು ಸೃಷ್ಠಿಯಾಗುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಕಾಸರಗೋಡು ಜಿಲ್ಲಾ ಲೈಬ್ರೇರಿ ಕೌನ್ಸಿಲ್ ಕಾರ್ಯಕಾರೀ ಸದಸ್ಯ ಕೆ.ಟಿ ವಿಜಯನ್ ಮಾಸ್ತರ್ ತರಗತಿ ನಡೆಸಿದರು. ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಸ್ವರ್ಗ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್, ಜಿಲ್ಲಾ ಲೈಬ್ರೇರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ ಉಪಸ್ಥಿತರಿದ್ದರು. ಎಣ್ಮಕಜೆ ಗ್ರಂಥಾಲಯ ಪಂಚಾಯತಿ ಸಮಿತಿ ಸಂಚಾಲಕ ರಾಮಕೃಷ್ಣ ರೈ ಸ್ವಾಗತಿಸಿ, ಸದಸ್ಯರಾದ ವಿನೋದ್ ಪೆರ್ಲ ವಂದಿಸಿದರು.