ಕುಂಬಳೆ: ಪ್ರವಾಸಿ ತಾಣವಾಗಿರುವ ಬಾಯಾರು ಪೊಸಡಿಗುಂಪೆ ಪರಿಸರದಲ್ಲಿ ಕಾಡುಕೋಣಗಳ ಹಾವಳಿ ತೀವ್ರಗೊಂಡಿದ್ದು ಪರಿಸರ ಪ್ರದೇಶದ ಜನರು ಭಯಭೀತರಾಗಿದ್ದಾರೆ.
ಪೊಸಡಿಗುಂಪೆ ಪರಿಸರದ ಸಜಂಕಿಲದಲ್ಲಿ ಕಳೆದ ಅನೇಕ ಕಾಲಗಳಿಂದ ಕಾಡುಕೋಣಗಳು ಕೃಷಿ ಪ್ರದೇಶಗಳಿಗೆ ಲಗ್ಗಿ ಇಡುತ್ತಿದ್ದು ವ್ಯಾಪಕ ಕೃಷಿ ಹಾನಿಯ ಜೊತೆಗೆ ಸಾಕು ಪ್ರಾಣಿಗಳಿಗೆ ಜೀವಹಾನಿ ನಡೆಸುತ್ತಿರುವುದು ವರದಿಯಾಗಿದೆ. ಪೊಸಡಿಗುಂಪೆ ನಿವಾಸಿ ವಸಂತ ಪಂಡಿತ್ ಎಂಬವರ ಎತ್ತೊಂದನ್ನು ಕಳೆದ ಎರಡು ದಿನಗಳ ಹಿಂದೆ ಕಾಡುಕೋಣ ತಿವಿದು ಕೊಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪೊಸಡಿಗುಂಪೆ ಪ್ರದೇಶ ಪ್ರವಾಸಿ ತಾಣವಾಗಿದ್ದು, ಕೋವಿಡ್ ನಿಯಂತ್ರಣಗಳನ್ನು ಹಿಂಪಡೆದ ಬಳಿಕ ಮತ್ತೆ ನಿಧಾನವಾಗಿ ಪ್ರವಾಸಿಗಳು ಆಗಮಿಸುತ್ತಿದ್ದು ಇದರ ಬೆನ್ನಲ್ಲೇ ಈ ಪರಿಸರದಲ್ಲಿ ಕಾಡುಕೋಣ ಸಹಿತ ಇತರ ಮೃಗಗಳು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಸಡಿಗುಂಪೆ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ಪ್ರದೇಶದಲ್ಲಿ ಅತ್ಯಂತ ಎತ್ತರದ ಮನೋಹರ ಪ್ರವಾಸಿ ಪ್ರದೇಶವಾಗಿದೆ. ಸಮುದ್ರಮಟ್ಟಕ್ಕಿಂತ 1060 ಪೀಟ್ ಎತ್ತರದಲ್ಲಿದ್ದು ಒಂದೆಡೆ ಅರಬ್ಬೀ ಸಮುದ್ರ ಮತ್ತು ಇನ್ನೊಂದಿ ಬದಿಯಿಂದ ಮಂಗಳೂರು ಮತ್ತು ಕುದ್ರೆಮುಖ ಸಹಿತ ಪಶ್ಚಿಮ ಘಟ್ಟಗಳನ್ನು ವೀಕ್ಷಿಸಲು ಕಾಣಸಿಗುತ್ತದೆ. ಪಾಂಡವರ ಬಾವಿ ಎಂದು ಕರೆಯಲ್ಪಡುವ ವಿಶೇಷ ಬಾವಿಗಳು, ಬೆಟ್ಟದ ಕೆಳಗೆ ಭಸ್ಮಗುಹೆ, ದೇವಾಲಯ ಮೊದಲಾದವುಗಳು ಈ ಪರಿಸರದಲ್ಲಿದೆ.
ಕಾಡುಕೋಣಗಳಲ್ಲದೆ ಇತ್ತೀಚೆಗೆ ಹುಲಿ-ಚಿರತೆಗಳ ಹೆಜ್ಜೆ ಗುರುತುಗಳೂ ಈ ಪರಿಸರದಲ್ಲಿ ಕಾಣಸಿಕ್ಕಿದ್ದು, ಪ್ರವಾಸಿಗರು ಆಗಮಿಸುವ ದೃಷ್ಟಿಯಿಂದ ಅಪಾಯಕಾರಿಯಾಗಿ ತೊಂದರೆಗೊಳಗಾಗುವ ಸಾಧ್ಯತೆ ಇದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಉಡಾಫೆಯ ಉತ್ತರ ನೀಡುತ್ತಿರುವುದು ಖೇದಕರವಾಗಿದೆ.