ಕೊಚ್ಚಿ: ಅಪಾರ್ಟ್ ಮೆಂಟ್ ಗಳಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದನ್ನು ನಿಷೇಧಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ರೆಸಿಡೆನ್ಸ್ ಅಸೋಸಿಯೇಷನ್ ಗಳಿಗೆ ನಿಷೇಧ ಮಾಡುವ ಅಧಿಕಾರವಿಲ್ಲ ಎಂದೂ ಹೈಕೋರ್ಟ್ ಹೇಳಿದೆ. ರೆಸಿಡೆನ್ಸ್ ಅಸೋಸಿಯೇಷನ್ ಗಳಿಗೆ ಅಪಾರ್ಟ್‍ಮೆಂಟ್ ಗಳಲ್ಲಿ ಸಾಕುಪ್ರಾಣಿಗಳನ್ನು ಸಾಕಲು ಅಥವಾ ಎಲಿವೇಟರ್‍ಗಳಿಗೆ ಪ್ರವೇಶವನ್ನು ನಿರಾಕರಿಸಲು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ತಿರುವನಂತಪುರಂ ಮೂಲದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‍ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪ್ರಾಣಿಗಳಿಗೆ ತಂಗಲು ಅವಕಾಶ ನೀಡದಿರುವುದು ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇಂತಹ ಅಡೆತಡೆಗಳು ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗಿದ್ದು, ದೇವರ ಸ್ವಂತ ನಾಡು ಎಂದು ಘೋಷಿಸಿಕೊಳ್ಳುವ ಕೇರಳದಲ್ಲಿ ಇತರ ಜೀವಗಳ ಹಕ್ಕುಗಳನ್ನು ಗೌರವಿಸಲು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಇದು ಸುಸಮಯ ಎಂದು ನ್ಯಾಯಾಲಯ ಹೇಳಿದೆ. ಆವಾಸಸ್ಥಾನದಲ್ಲಿ ಸಾಕುಪ್ರಾಣಿಗಳಿದ್ದು ಅವುಗಳ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಗೋಪಿನಾಥ್ ಪಿ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
ಪ್ರಾಣಿಗಳೊಂದಿಗೆ ಬದುಕುವ ಮನೋಭಾವವನ್ನು ಜನರಲ್ಲಿ ಮೂಡಿಸಲು ರಾಜ್ಯ ಸರ್ಕಾರ ಮತ್ತು ಇತರ ಆಡಳಿತಗಳು ಪ್ರಯತ್ನಿಸಬೇಕು ಮತ್ತು ಇದಕ್ಕಾಗಿ ಶಾಲಾ ಹಂತದಿಂದಲೇ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು 2015 ರಲ್ಲಿ ಹೊರಡಿಸಿದ ಆದೇಶವನ್ನು ರೆಸಿಡೆನ್ಸ್ ಅಸೋಸಿಯೇಷನ್‍ಗಳು ಪಾಲಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಇದೇ ವೇಳೆ, ಅಪಾಟ್ಮೆರ್ಂಟ್ಗಳಲ್ಲಿ ಸಾಕುಪ್ರಾಣಿಗಳನ್ನು ಬೆಳೆಸುವಾಗ ನೆರೆಹೊರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಲಹೆ ನೀಡಲಾಗಿದೆ.