ಲಂಡನ್: ಭಾರತದ ನೇತೃತ್ವದ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟಕ್ಕೆ ಅಮೆರಿಕ ನ.10 ರಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ.
101 ನೇ ಸದಸ್ಯ ರಾಷ್ಟ್ರವಾಗಿ ಅಮೆರಿಕ ಸೇರ್ಪಡೆಯಾಗಿದ್ದು, ಐಎಸ್ಎ ಚೌಕಟ್ಟು ಒಪ್ಪಂದಕ್ಕೆ ಹವಾಮಾನಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷರ ವಿಶೇಷ ದೂತರಾಗಿರುವ ಜಾನ್ ಕೆರ್ರಿ ಸಹಿ ಹಾಕಿದ್ದಾರೆ.
ಕೆರ್ರಿ ಅಮೆರಿಕದ ಸದಸ್ಯತ್ವವನ್ನು ಸೌರ ಶಕ್ತಿಯ ಕ್ಷಿಪ್ರ ನಿಯೋಜನೆಯೆಡೆಗೆ ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಹಲವು ಸಮಯದ ಬಳಿಕ ಇದು ಸಾಧ್ಯವಾಗುತ್ತಿದೆ ಹಾಗೂ ನಾವು ಪ್ರಧಾನಿ ನರೇಂದ್ರ ಮೋದಿ ಅವರು ನೇತೃತ್ವ ವಹಿಸಿ ರಚಿಸಿದ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟಕ್ಕೆ ಸೇರ್ಪಡೆಯಾಗಿರುವುದಕ್ಕೆ ಸಂತಸವಾಗುತ್ತಿದೆ ಎಂದು ಕೆರ್ರಿ ಹೇಳಿದ್ದಾರೆ.
"ನಾವು ವಿವರಗಳನ್ನು ಆಳವಾಗಿ ಯೋಜಿಸಿದ್ದೇವೆ ಹಾಗೂ ಇದೇ ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗಿದ್ದಕ್ಕೆ ಸಂತಸವಿದೆ. ಜಾಗತಿಕ ಮಟ್ಟದಲ್ಲಿ ಕ್ಷಿಪ್ರಗತಿಯ ಸೋಲಾರ್ ನಿಯೋಜನೆಗೆ ಇದು ಬಹುಮುಖ್ಯ ಕೊಡುಗೆಯಾಗಲಿದೆ. ಪ್ರಮುಖವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಕೊಡುಗೆಯಾಗಲಿದೆ ಎಂದು ಕೆರ್ರಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಐಎಸ್ಎ ನ 101 ನೇ ಸದಸ್ಯ ರಾಷ್ಟ್ರವಾಗಿದ್ದಕ್ಕೆ ಭಾರತದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಸ್ವಾಗತಿಸಿದ್ದಾರೆ.
ಅಮೆರಿಕ ಸೇರ್ಪಡೆಯಾಗಿರುವುದು ಐಎಸ್ಎ ನ್ನು ಮತ್ತಷ್ಟು ಬಲಪಡಿಸಲಿದ್ದು, ಜಗತ್ತಿಗೆ ಶುದ್ಧ ಶಕ್ತಿಯ ಮೂಲವನ್ನು ನೀಡುವುದಕ್ಕೆ ಸಾಧ್ಯವಾಗಲಿದೆ ಎಂದು ಯಾದವ್ ಹೇಳಿದ್ದಾರೆ.