ನವದೆಹಲಿ; ರೈಲಿನಲ್ಲಿ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವ ಜನರು ಇನ್ನು ಮುಂದೆ ಆಹಾರಗಳನ್ನು ಪ್ಯಾಕ್ ಮಾಡಿಕೊಳ್ಳುವುದು ಬೇಡ. ಭಾರತೀಯ ರೈಲ್ವೆ ಆಹಾರ ಸರಬರಾಜು ಮಾಡುವುದನ್ನು ಪುನಃ ಆರಂಭಿಸಲಿದೆ.
ಭಾರತೀಯ ರೈಲ್ವೆ ಕೋವಿಡ್ ಸಂದರ್ಭದಲ್ಲಿ ರೈಲಿನಲ್ಲಿ ಆಹಾರ ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿತ್ತು. ಈಗ ದೇಶದಲ್ಲಿ ಕೋವಿಡ್ ಪ್ರಕರಣ ಹತೋಟಿಗೆ ಬಂದಿದ್ದು, ಸೇವೆಯನ್ನು ಪುನಃ ಆರಂಭಿಸಲು ಇಲಾಖೆ ನಿರ್ಧರಿಸಿದೆ.
ರೈಲ್ವೆ ಕೋವಿಡ್ ಸಂದರ್ಭದಲ್ಲಿ ಓಡಿಸುತ್ತಿದ್ದ ವಿಶೇಷ ರೈಲುಗಳನ್ನು ಸ್ಥಗಿತಗೊಳಿಸಿ ಸಾಮಾನ್ಯ ಪ್ರಯಾಣ ದರದ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಕಳೆದ ವಾರ ಘೋಷಣೆ ಮಾಡಿತ್ತು. ಈ ಕುರಿತು ರೈಲ್ವೆ ವಿಭಾಗಗಳಿಗೆ ಸೂಚನೆ ನೀಡಿತ್ತು.
ಈಗ ರೈಲುಗಳಲ್ಲಿ ತಯಾರು ಮಾಡಿದ ಆಹಾರಗಳನ್ನು ವಿತರಣೆ ಮಾಡುವುದನ್ನು ಪುನಃ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ದೂರ ಪ್ರಯಾಣ ಮಾಡುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.ಕೋವಿಡ್ ಸಂರ್ಭದಿಂದ ರೈಲುಗಳು ತಯಾರು ಮಾಡಿದ ಆಹಾರ ಪೂರೈಕೆ ಸ್ಥಗಿತಗೊಂಡ ಕಾರಣ ದೂರ ಪ್ರಯಾಣ ಮಾಡುವ ಜನರು ತಾವೇ ಆಹಾರವನ್ನು ಪ್ಯಾಕ್ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು.
ಆದರೆ ಈಗ ಭಾರತೀಯ ರೈಲ್ವೆ ತಯಾರು ಮಾಡಿದ ಆಹಾರ ಪದಾರ್ಥಗಳ ಪೂರೈಲೆ ಪುನಃ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಆದರೆ ಎಂದಿನಿಂದ ಇದನ್ನು ಆರಂಭಿಸಲಾಗುತ್ತದೆ ಎಂದು ಇಲಾಖೆ ಹೇಳಿಲ್ಲ.
ಶುಕ್ರವಾರ ಐಆರ್‌ಸಿಟಿಸಿಗೆ ರೈಲ್ವೆ ಬೋರ್ಡ್ ಪತ್ರವನ್ನು ಬರೆದಿದೆ. ದೇಶದಲ್ಲಿ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದಿದ್ದು ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಸಾಮಾನ್ಯ ರೈಲುಗಳನ್ನು ಓಡಿಸುವ ಜೊತೆ ರೈಲಿನಲ್ಲಿ ತಯಾರು ಮಾಡಿದ ಆಹಾರ ಪದಾರ್ಥಗಳನ್ನು ಸಹ ನೀಡಲಾಗುತ್ತದೆ ಎಂದು ಹೇಳಿದೆ.
ಕೋವಿಡ್ ಪರಿಸ್ಥಿತಿಯ ಬಳಿಕ ಭಾರತೀಯ ರೈಲ್ವೆ ಸಹಜ ಸ್ಥಿತಿಗೆ ಮರಳುತ್ತಿದೆ. ಮೊದಲು ದೂರದ ಮಾರ್ಗಗಳ ರೈಲುಗಳ ಸೇವೆ ಆರಂಭಿಸಿತ್ತು. ಬಳಿಕ ಪ್ಯಾಸೆಂಜರ್, ಡೆಮು ರೈಲುಗಳ ಸಂಚಾರಕ್ಕೆ ಒಪ್ಪಿಗೆ ನೀಡಲಾಗಿತ್ತು. ಈಗ ಸಾಮಾನ್ಯ ರೈಲುಗಳನ್ನು ಓಡಿಸಲಾಗುತ್ತಿದೆ.
ಕೇಂದ್ರ ವಿಮಾನಯಾನ ಸಚಿವಾಲಯ ಕಳೆದ ವಾರ ದೇಶಿಯ ವಿಮಾನಗಳಲ್ಲಿಯೂ ಆಹಾರಗಳ ಸರಬರಾಜು ಮಾಡಲು ಅವಕಾಶ ನೀಡಿತ್ತು. ಈ ತೀರ್ಮಾನದ ಬಳಿಕ ಭಾರತೀಯ ರೈಲ್ವೆ ಸಹ ತಯಾರು ಮಾಡಿದ ಆಹಾರ ಸರಬರಾಜು ಪುನಃ ಆರಂಭಿಸಲು ನಿರ್ಧರಿಸಿದೆ.