ನವದೆಹಲಿ: ಸಮಯದ ಅಭಾವ ಇರುವ ಕಾರಣ ಪ್ರಕರಣಗಳ ವಿಚಾರಣೆಗೆ ಕಾಲಮಿತಿ ನಿಗದಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿತು.
ನವದೆಹಲಿ: ಸಮಯದ ಅಭಾವ ಇರುವ ಕಾರಣ ಪ್ರಕರಣಗಳ ವಿಚಾರಣೆಗೆ ಕಾಲಮಿತಿ ನಿಗದಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವೀಲ್ಕರ್ ಹಾಗೂ ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರು ತಮ್ಮ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದನ್ನು ಪ್ರಶ್ನಿಸಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ (ಸಿಎಟಿ) ಅರ್ಜಿ ಸಲ್ಲಿಸಿದ್ದರು.
ಸಿಎಟಿಯ ಈ ಆದೇಶವನ್ನು ಕಲ್ಕತ್ತ ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
'ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿದ್ದ ಎಂ.ಎನ್.ವೆಂಕಟಾಚಲಯ್ಯ ಅವರು ಅರ್ಜಿಗಳ ವಿಚಾರಣೆಗೆ ಕಾಲಮಿತಿ ನಿಗದಿ ಮಾಡಬೇಕು ಎಂಬ ಸಲಹೆ ನೀಡಿದ್ದರು. ಇಂಥ ಕ್ರಮದ ಬಗ್ಗೆ ಈಗ ನಾವು ಗಂಭೀರವಾಗಿ ಆಲೋಚನೆ ಮಾಡಬೇಕಿದೆ' ಎಂದು ನ್ಯಾಯಪೀಠ ಹೇಳಿತು.
'ವಿಚಾರಣೆ ಸಂದರ್ಭದಲ್ಲಿ, ಒಂದು ವಿಷಯ ಕುರಿತು ಅನೇಕ ವಕೀಲರು ಒಂದೇ ರೀತಿಯ ವಾದ ಮಂಡಿಸುವುದರಿಂದ ಕೋರ್ಟ್‌ನ ಸಮಯ ವ್ಯರ್ಥವಾಗುತ್ತಿದೆ' ಎಂದು ನ್ಯಾಯಪೀಠ ಹೇಳಿತು.
ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚನೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ನ.29ಕ್ಕೆ ಮಂದೂಡಿತು.