ಕಾಸರಗೋಡು: "ಚಿರಸ್ಮರಣೆ" ಎಂಬ ಹೆಸರಿನ ಸ್ವಾತಂತ್ರ್ಯ ಸಂಗ್ರಾಮ ಸ್ಮೃತಿ ಯಾತ್ರೆ ಕಾಸರಗೋಡು ಜಿಲ್ಲೆಯಲ್ಲಿ ಪರ್ಯಟನೆ ಆರಂಭಿಸಿದೆ.
ದೇಶದ ಸ್ವಾತಂತ್ರ್ಯೋತ್ಸವದ 75 ನೇ ವಾರ್ಷಿಕೋತ್ಸವ ಆಚರಣೆ"ಆಝಾದಿ ಕಾ ಅಮೃತ್ ಮಹೋತ್ಸವ್" ಅಂಗವಾಗಿ ಶಿಕ್ಷಣ ಇಲಾಖೆ ಆಯ್ದ ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಈ ಪರ್ಯಟನೆ ನಡೆಸಿತು.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಮಂಜೇಶ್ವರದ ಗಿಳಿವಿಂಡುವಿನಿಂದ ಈ ಯಾತ್ರೆ ತನ್ನ ಪ್ರಯಾಣ ಆರಂಭಿಸಿತು. ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಸಾಂಸ್ಕøತಿಕ ಶ್ರೀಮಂತಿಕೆಯ, ವೈವಿಧ್ಯತೆಯ, ಮತೀಯ ಸೌಹಾರ್ದತೆಯ ಮಣ್ಣಿನಿಂದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಶೋಧಿಸಲು ಹೊರಟ ವಿದ್ಯಾರ್ಥಿಗಳ ಯತ್ನ ಅವರ ಬದುಕಿನಲ್ಲಿ ದೊಡ್ಡ ಭಂಡವಾಳವಾಗಲಿದೆ ಎಂದವರು ಈ ವೇಳೆ ಅಭಿಪ್ರಾಯಪಟ್ಟರು.
ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮಂಥೇರೋ ಅಧ್ಯಕ್ಷತೆ ವಹಿಸಿದ್ದರು. ಸ್ಮೃತಿ ಯಾತ್ರೆಗೆ ಅವರು ಹಸುರು ನಿಶಾನೆ ತೋರಿದರು.
ಎಸ್.ಎ.ಟಿ. ಶಾಲೆಯ ಶಿಕ್ಷಕ ಗಣೇಶ್ ಪ್ರಸಾದ್ ನಾಯಕ್ ಅವರು ರಾಷ್ಟ್ರಕವಿಗಳು ರಚಿಸಿದ ಗಾಯನ ಆಲಾಪಿಸಿದರು. ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ ಪ್ರಧಾನ ಭಾಷಣ ಮಾಡಿದರು. ಸರ್ವ ಶಿಕ್ಷಣ ಅಭಿಯಾನ ಕೇರಳ ಡಿ.ಪಿ.ಸಿ.ಪಿ.ರವೀಂದ್ರನ್, ಡಿ.ಇ.ಒ.ನಂದಿಕೇಶ, ಎನ್.ಎಸ್.ಎಸ್. ಕಾರ್ಯಕ್ರಮ ಸಂಚಾಲಕ ಹರಿ, ಎಚ್.ಎಸ್.ಎಸ್. ಸಂಚಾಲಕ ಮೋಹನನ್, ಎ.ಇ.ಒ.ಗಳಾದ ಆಗಸ್ಟಿನ್ ಬರ್ನಾರ್ಡ್, ಕೆ.ಶ್ರೀಧರನ್, ಗಣೇಶನ್, ಡಯಟ್ ಪ್ರತಿನಿಧಿಗಳಾದ ವಿನೋದ್ ಕುಮಾರ್ ಪೆರುಂಬಳ, ನಾರಾಯಣನ್, ಗಿರೀಶ್ ಬಾಬು ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್ ಸ್ವಾಗತಿಸಿದರು.
ನಂತರ ಯಾತ್ರೆ ಕೃಷ್ಣ ಪಿಳ್ಳೆ ಮತ್ತು ಎ.ವಿ.ಕುಂಞಂಬು ಅವರ ಕಾರಡ್ಕದ ನಾರಂತಟ್ಟ ದ ತರವಾಡಿಗೆ ಪ್ರಯಾಣ ಬೆಳೆಸಿತು. ಅಲ್ಲಿ ನಾಡಿನ ಹಿರಿಯರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ತದನಂತರ ತಳಂಗರೆ ಕಡವತ್ ಉಬೈದ್ ಸ್ಮಾರಕ ಕೇಂದ್ರಕ್ಕೆ ಆಗಮಿಸಿದ ತಂಡವನ್ನು ಸ್ವಾಗತಿಸಲಾಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಕಾಸರಗೋಡುನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಪಿ.ಎಸ್.ಹಮೀದ್ ಉಬೈದ್ ಸಂಸ್ಮರಣೆ ನಡೆಸಿದರು. ನಗರಸಭೆ ಉಪಾಧ್ಯಕ್ಷೆ ಷಂಸೀದಾ ಫಿರೋಝ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.
ಅಲ್ಲಿಂದ ಬೇಕಲಕೋಟೆ, ವೆಳ್ಳಿಕೋತ್ ಮೊದಲಾದೆಡೆ ತಾತ್ರಾತಂಡ ಸಂದರ್ಶನ ನಡೆಸಿತು.
ಇಂದಿನ(ಭಾನುವಾರ) ಯಾತ್ರೆ:
ನ.28 ರಂದು ಎಸ್.ವಿ.ಕೆ.ಭವನ, ಮಡಿಕೈ ಎಚ್ಚಿಕಾನಂ ತರವಾಡು, ನೀಲೇಶ್ವರ ರಾಜಾಸ್, ಕುಟ್ಟಮತ್ ಭವನ, ಟಿ.ಎಸ್.ತಿರುಮುಂಬ್ ಭವನ ಮೊದಲಾದೆಡೆ ಪರ್ಯಟನೆ ನಡೆಸಲಿದೆ. ಸಂಜೆ 3.45ಕ್ಕೆ ಕಯ್ಯೂರು ಬಲಿದಾನ ಭವನದಲ್ಲಿ ಸಮಾರೋಪಗೊಳ್ಳಲಿದೆ.