ಲಖನೌ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವುದಾಗಿ ಘೋಷಿಸಿದ್ದರೂ, ಕನಿಷ್ಠ ಬೆಂಬಲ ಬೆಲೆ ಮೇಲಿನ ಕಾನೂನು ಖಾತರಿ ಸೇರಿದಂತೆ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ರೈತ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಪುನರುಚ್ಚರಿಸಿದ್ದಾರೆ.
ಇಕೋ ಮೈದಾನದಲ್ಲಿ ಕಿಸಾನ್ ಮಹಾಪಂಚಾಯತ್‌ನಲ್ಲಿ ಸೋಮವಾರ ಮಾತನಾಡಿದ ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿಲ್ಲ ಎಂದು ಟೀಕಿಸಿದ ಅವರು, ದೇಶದಲ್ಲಿ ಎಂಎಸ್‌ಪಿ ಕಾನೂನು ಆಗುವವರೆಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಕದನ ವಿರಾಮಕ್ಕೆ ಕರೆ ನೀಡಿರುವುದು ಸರಕಾರವೇ ಹೊರತು ನಾವಲ್ಲ, ರೈತರು, ಯುವಕರು, ಕಾರ್ಮಿಕರು ಒಗ್ಗೂಡಿ ಹೋರಾಟ ಮುಂದುವರಿಸುವ ಸಮಯ ಬಂದಿದೆ. ಜಿನ್ನಾ, ಹಿಂದೂ ಮತ್ತು ಮುಸ್ಲಿಮರ ಹೆಸರಿನಲ್ಲಿ ರೈತರನ್ನು ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ರೈತರು ಒಗ್ಗಟ್ಟಾಗಿ ನಿಲ್ಲಬೇಕು ಮತ್ತು ಅಂತಹ ಷಡ್ಯಂತ್ರಗಳಿಗೆ ಬಲಿಯಾಗಕೂಡದು ಎಂದು ಹೇಳಿದರು.
ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡುವುದಾಗಿ ಹೇಳಿದೆಯಾದರೂ, ಬಿಜೆಪಿಯನ್ನು ಬೆಂಬಲಿಸಬೇಕೋ ಅಥವಾ ವಿರೋಧಿಸಬೇಕೋ ಎಂಬುದನ್ನು ಸರ್ಕಾರದ ಕ್ರಮ ಮತ್ತು ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದಾಗ ನಿರ್ಧರಿಸಲಾಗುವುದು ಎಂದು ಟಿಕಾಯತ್ ಹೇಳಿದರು.