ಕೊಚ್ಚಿ: ಆಟೊರಿಕ್ಷಾದ ಮುಂದಿನ ಸೀಟಿನಲ್ಲಿ ಚಾಲಕನೊಂದಿಗೆ ಪ್ರಯಾಣಿಸುವ ಪ್ರಯಾಣಿಕರು ಅಪಘಾತದ ಸಂದರ್ಭದಲ್ಲಿ ವಿಮೆಗೆ ಅರ್ಹರಾಗಿರುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಗೂಡ್ಸ್ ಆಟೋರಿಕ್ಷಾದಲ್ಲಿ ಚಾಲಕನೊಂದಿಗೆ ಸೀಟನ್ನು ಹಂಚಿಕೊಂಡು ಪ್ರಯಾಣಿಸುವ ವೇಳೆ ಅಪಘಾತ ಸಂಭವಿಸಿ ಮಂಗಳೂರು ಮೂಲದ ಭೀಮಾ ಎಂಬುವರು ಗಾಯಗೊಂಡ ಖಟ್ಲೆಗೆ ಸಂಬಂಧಿಸಿ ಈ ತೀರ್ಪು ನೀಡಲಾಗಿದೆ.
ಕಾಸರಗೋಡು ಮೂಲದ ಬೈಜುಮೋನ್ ಎಂಬವರು ನಿರ್ಮಾಣ ಸಾಮಗ್ರಿಗಳೊಂದಿಗೆ ಗೂಡ್ಸ್ ಅಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ 2018 ರ ಜನವರಿ 23 ರಂದು ಮಧ್ಯಾಹ್ನ ಅಪಘಾತ ಸಂಭವಿಸಿತ್ತು. 1.50 ಲಕ್ಷ ಪರಿಹಾರ ನೀಡುವಂತೆ ಭೀಮಾ ಅರ್ಜಿ ಸಲ್ಲಿಸಿದ್ದ ನ್ಯಾಯಮಂಡಳಿ ತೀರ್ಪಿನ ವಿರುದ್ಧ ವಿಮಾ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಚಾಲಕನ ಸೀಟಿನಲ್ಲಿ ಕುಳಿತು ಅಕ್ರಮವಾಗಿ ಪ್ರಯಾಣಿಸಿದ ವ್ಯಕ್ತಿಗೆ ವಿಮಾ ರಕ್ಷಣೆ ಸಿಗುವುದಿಲ್ಲ ಎಂಬ ಕಂಪನಿಯ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಆಟೊ ಚಾಲಕ ಹಾಗೂ ಮಾಲೀಕರಾದ ಬೈಜು ಮೊನನ್ ಅವರು ಪರಿಹಾರ ನೀಡಲು ಹೊಣೆಗಾರರಾಗಿರುತ್ತಾರೆ ಎಂದೂ ನ್ಯಾಯಾಲಯ ತೀರ್ಪು ನೀಡಿದೆ.