ಬದಿಯಡ್ಕ: ಉಕ್ಕಿನಡ್ಕದಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸಾ ಚಟುವಟಿಕೆಗಳನ್ನು ನಿಲ್ಲಿಸದಂತೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಶನಿವಾರ ಉಕ್ಕಿನಡ್ಕ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ಇತ್ತೀಚೆಗೆ ಕೋವಿಡ್ ಆಸ್ಪತ್ರೆಯಾಗಿ ಮೆಡಿಕಲ್ ಕಾಲೇಜು ಚಟುವಟಿಕೆಗಳು ಆರಂಭವಾಗಿತ್ತು. ಆದರೆ ಇದೀಗ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯು ಮುಚ್ಚುವ ಹಂತಕ್ಕೆ ತಲುಪಿದೆ. ಕೂಡಲೇ ಹೊರರೋಗಿ ಚಿಕಿತ್ಸಾ ಘಟಕವನ್ನು ಆರಂಭಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ ಕೋವಿಡ್ ಆಸ್ಪತ್ರೆಯಾಗಿ ಬದಲಾದ ಮೆಡಿಕಲ್ ಕಾಲೇಜಿನಲ್ಲಿ ಅಗತ್ಯ ಸೌಲಭ್ಯಗಳನ್ನು ಅಳವಡಿಸಿಕೊಂಡು ಹೊರರೋಗಿ ಚಿಕಿತ್ಸಾ ಘಟಕವನ್ನು ಕೂಡಲೇ ಆರಂಭಿಸುವುದರೊಂದಿಗೆ ಕಾಸರಗೋಡಿನ ಜನತೆಗೆ ನ್ಯಾಯ ಒದಗಿಸಬೇಕು. ಮುಂದೆ ಅತಿಶೀಘ್ರದಲ್ಲಿ ಪರಿಪೂರ್ಣವಾದ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸರ್ಕಾರವು ಮುಂದೆ ಬಾರದಿದ್ದಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರಬಲ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನು ಅವರು ನೀಡಿದರು.
ಕಾಸರಗೋಡು ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ, ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ, ಮುಖಂಡರಾದ ಶೈಲಜಾ ಭಟ್, ನಾರಾಯಣ ನಾಯ್ಕ್, ಡಿ.ಶಂಕರ, ಸುಮಿತ್ ರಾಜ್, ಬಟ್ಟುಶೆಟ್ಟಿ ಪೆರ್ಲ, ಅನಿಲ್ ಮಣಿಯಂಪಾರೆ, ಸುನಿಲ್ ಪಿ.ಆರ್., ರೂಪವಾಣಿ ಆರ್.ಭಟ್, ಪುಷ್ಪ ಆಮೆಕ್ಕಳ, ಸುಕುಮಾರ ಕುದ್ರೆಪ್ಪಾಡಿ, ಬದಿಯಡ್ಕ ಹಾಗೂ ಎಣ್ಮಕಜೆ ಗ್ರಾಮಪಂಚಾಯಿತಿ ಬಿಜೆಪಿ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಹಿಂದೆ ಕೋವಿಡ್ ತಪಾಸಣೆಗಾಗಿ ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿದ್ದ ಸಿಬ್ಬಂದಿಗಳನ್ನು ಇದೀಗ ಜಿಲ್ಲಾಡಳಿತ ವರ್ಗಾವಣೆಗೊಳಿಸಿದೆ. ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರೀ ಮೆಡಿಕಲ್ ಕಾಲೇಜನ್ನು ಸರ್ಕಾರ ಹಾಗೂ ರಾಜಕೀಯ ನೇತಾರರು ಅವಗಣಿಸುತ್ತಿದ್ದಾರೆ. ಮೆಡಿಕಲ್ ಕಾಲೇಜು ನಿರ್ಮಾಣ ಕೂಡಲೇ ಆರಂಭಿಸಿ ಇದನ್ನು ತೆರೆದು ಕಾರ್ಯಾಚರಿಸುವಂತೆ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಧರಣಿ ನಡೆಸಿತು. 400 ಕೋಟಿ ರೂಪಾಯಿ ವ್ಯಯಿಸಿ ಕಟ್ಟಡ ನಿರ್ಮಿಸಲಾಗಿದೆ. ಅದನ್ನು ಜನರಿಗಾಗಿ ತೆರೆಯಬೇಕೆಂದು ಬಿಜೆಪಿ ಒತ್ತಾಯಿಸಿದೆ.