ನವದೆಹಲಿ: ಮುಂಬರುವ ಚುನಾವಣೆಯಲ್ಲಿ ಸೋಲು ಅನುಭವಿಸುವ ಸುಳಿವು ಅರಿತು ಇದ್ದಕ್ಕಿದ್ದಂತೆ ದೇಶದ ವಾಸ್ತವವನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ ನಂತರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ನರೇಂದ್ರ ಮೋದಿ ಜೀ, ಪ್ರತಿಭಟನೆ ವೇಳೆ 600 ರೈತರು ಹುತಾತ್ಮರಾದರು, 350 ದಿನಗಳಿಗಿಂತ ಹೆಚ್ಚು ದಿನ ಹೋರಾಟ, ನಿಮ್ಮ ಮಂತ್ರಿಯ ಮಗ ರೈತರನ್ನು ತುಳಿದು ಸಾಯಿಸಿದರೂ ನೀವು ಕೇರ್ ಮಾಡಲಿಲ್ಲ ಎಂದಿದ್ದಾರೆ.
"ನಿಮ್ಮ ಪಕ್ಷದ ನಾಯಕರು ರೈತರನ್ನು ಅವಮಾನಿಸಿದ್ದಾರೆ ಮತ್ತು ಅವರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಗೂಂಡಾಗಳು, ದುಷ್ಕರ್ಮಿಗಳು ಎಂದು ಕರೆದಿದ್ದೀರಿ, ನೀವೇ ಅವರನ್ನು 'ಆಂದೋಲನಜೀವಿ' ಎಂದು ಕರೆದಿದ್ದೀರಿ, ಲಾಠಿಯಿಂದ ಹೊಡೆದಿದ್ದೀರಿ, ಅವರನ್ನು ಬಂಧಿಸಿದ್ದೀರಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.
"ಈಗ, ಚುನಾವಣೆಯಲ್ಲಿ ಸೋಲು ಅನುಭವಿಸುವ ಸುಳಿವು ಅರಿತು ನೀವು ಈ ದೇಶದ ವಾಸ್ತವವನ್ನು ಇದ್ದಕ್ಕಿದ್ದಂತೆ ಅರಿತುಕೊಂಡಿದ್ದೀರಿ - ಈ ದೇಶವನ್ನು ರೈತರಿಂದ ನಿರ್ಮಿಸಲಾಗಿದೆ, ಇದು ರೈತರ ದೇಶ, ಅವರು ದೇಶದ ನಿಜವಾದ ರಕ್ಷಕರು. ಆದರೆ ರೈತರ ಹಿತಾಸಕ್ತಿಗಳನ್ನು ತುಳಿಯುವ ಮೂಲಕ ದೇಶವನ್ನು ನಾಶಪಡಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.