ನವದೆಹಲಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಶ್ರೀ ರಾಮಾಯಣ ಯಾತ್ರೆಯ ವಿಶೇಷ ರೈಲುಗಳ ಸೇವೆಯನ್ನು ಆರಂಭಿಸಿದೆ.
ನವೆಂಬರ್ 7ರಿಂದ ರಾಷ್ಟ್ರ ರಾಜಧಾನಿ ದೆಹಲಿಯಿಂದ ರೈಲುಗಳ ಸಂಚಾರ ಆರಂಭವಾಗಿದೆ. IRCTC ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆ ಪ್ರಕಾರ, ಶ್ರೀ ರಾಮಾಯಣ ಯಾತ್ರೆಗೆ ವಿವಿಧ ಪ್ಯಾಕೇಜ್‌ಗಳು ಲಭ್ಯವಿದೆ. ಮುಂದಿನ ಪ್ರವಾಸವು ನ.16 ರಿಂದ ಪ್ರಾರಂಭವಾಗಲಿದ್ದು, 3ನೇ ಪ್ರಯಾಣವು ನ.25ರಿಂದ ಪ್ರಾರಂಭವಾಗುತ್ತದೆ ಎಂದು IRCTC ತಿಳಿಸಿದೆ.
ಈ ಸ್ಥಳಗಳಲ್ಲಿ ತೀರ್ಥಯಾತ್ರೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ವಿಶೇಷ ರೈಲುಗಳು ಹಲವಾರು ಧಾರ್ಮಿಕ ನಗರಗಳಿಗೆ ಸಂಚರಿಸಲಿವೆ.
ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲಿನ ಮೊದಲ ಪ್ರವಾಸವು ಭಾನುವಾರ ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಶುರುವಾಯಿತು. ಭಗವಾನ್ ಶ್ರೀ ರಾಮನ ಜೀವನ ಮತ್ತು ಸಂಸ್ಕೃತ ಮಹಾಕಾವ್ಯ ರಾಮಾಯಣದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ತಲುಪಲು ಈ ರೈಲು ಸಿದ್ಧವಾಗಿದೆ. ಒಟ್ಟು 17 ದಿನಗಳಲ್ಲಿ ಈ ಪ್ರಯಾಣ ಪೂರ್ಣಗೊಳ್ಳಲಿದೆ. ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲು ದರ: ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಭಾರತ ಸರ್ಕಾರದ ಉಪಕ್ರಮ 'ದೇಖೋ ಅಪ್ನಾ ದೇಶ್'ಗೆ ಅನುಗುಣವಾಗಿ IRCTC ಈ ವಿಶೇಷ ಪ್ರವಾಸಿ ರೈಲನ್ನು ಪ್ರಾರಂಭಿಸಿದೆ. 2AC ಗೆ ಪ್ರತಿ ವ್ಯಕ್ತಿಗೆ 82,950 ರೂ. ಮತ್ತು 1AC ವರ್ಗಕ್ಕೆ 1,02,095 ರೂ. ದರವನ್ನು ನಿಗದಿಪಡಿಸಲಾಗಿದೆ. ಈ ದರಗಳು AC ಕ್ಲಾಸ್ ರೈಲು ಪ್ರಯಾಣ, AC ಹೋಟೆಲ್‌ಗಳಲ್ಲಿ ವಸತಿ, ಊಟ (VEG ಮಾತ್ರ), ಎಲ್ಲಾ ವರ್ಗಾವಣೆ ಮತ್ತು AC ವಾಹನಗಳಲ್ಲಿ ವೀಕ್ಷಣೆ, ಪ್ರಯಾಣ ವಿಮೆ ಮತ್ತು IRCTC ಟೂರ್ ಮ್ಯಾನೇಜರ್‌ಗಳ ಸೇವೆ ಇತ್ಯಾದಿಗಳನ್ನು ಒಳಗೊಂಡಿದೆ. ಎಲ್ಲಾ ಅಗತ್ಯ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪ್ರವಾಸದ ಸಮಯದಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಪ್ರಯಾಣವನ್ನು ಒದಗಿಸುವ ಮೂಲಕ ಕಾಳಜಿ ವಹಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಶ್ರೀ ರಾಮಾಯಣ ಯಾತ್ರಾ ವಿಶೇಷ ಪ್ಯಾಕೇಜ್: ಶ್ರೀ ರಾಮಾಯಣ ಯಾತ್ರಾ ಎಕ್ಸ್ ಪ್ರೆಸ್ ನಲ್ಲಿ ವಿವಿಧ ಪ್ಯಾಕೇಜ್ ಗಳಿದ್ದು, 12 ರಾತ್ರಿಗಳು/13 ದಿನಗಳ ಶ್ರೀ ರಾಮಾಯಣ ಯಾತ್ರಾ ಎಕ್ಸ್ ಪ್ರೆಸ್-ಮಧುರೈ, ಇದು ನ.16 ರಂದು ಹೊರಡಲಿದೆ. ಮತ್ತೊಂದು ರೈಲು ಶ್ರೀ ರಾಮಾಯಣ ಯಾತ್ರಾ ಎಕ್ಸ್ ಪ್ರೆಸ್-ಶ್ರೀ ಗಂಗಾನಗರದ 16 ರಾತ್ರಿ/17 ದಿನಗಳ ಪ್ಯಾಕೇಜ್ ಇದ್ದು, ರೈಲು ನ.25 ರಂದು ಹೊರಡಲಿದೆ ಎಂದು IRCTC ಹೇಳಿಕೆಯಲ್ಲಿ ತಿಳಿಸಿದೆ. ಈ ರೈಲುಮಾರ್ಗದ ಮೊದಲ ನಿಲ್ದಾಣವು ಅಯೋಧ್ಯೆಯಲ್ಲಿರಲಿದೆ. ಅಲ್ಲಿಯ ನಂದಿಗ್ರಾಮದ ಭಾರತ ಮಂದಿರ, ಶ್ರೀ ರಾಮ ಜನ್ಮಭೂಮಿ ಮಂದಿರ ಮತ್ತು ಹನುಮಾನ ಗಢಿ ಮಂದಿರಗಳಿಗೆ ಯಾತ್ರಾರ್ಥಿಗಳು ಭೇಟಿ ನೀಡಲಿದ್ದಾರೆ. ಇದರ ನಂತರ, ಬಿಹಾರದ ಸೀತಾಮಢಿಗೆ ಹೋದನಂತರ ಜನಕಪುರದ ಶ್ರೀ ರಾಮ ಜಾನಕಿ ದೇವಸ್ಥಾನವನ್ನು ಭೇಟಿ ಮಾಡಬಹುದು. ಇದಾದ ನಂತರ ಯಾತ್ರಾರ್ಥಿಗಳು ವಾರಣಾಸಿಗೆ ತೆರಳಲಿದ್ದಾರೆ. ಯಾತ್ರಾರ್ಥಿಗಳು ವಾರಣಾಸಿಯಿಂದ ಪ್ರಯಾಗ, ಶೃಂಗವರಪುರ ಮತ್ತು ಚಿತ್ರಕೂಟಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಇದಾದ ಬಳಿಕ ನಾಸಿಕಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ತ್ರ್ಯಂಬಕೇಶ್ವರ ದೇವಸ್ಥಾನ ಮತ್ತು ಪಂಚವಟಿಗೆ ಯಾತ್ರಾರ್ಥಿಗಳು ಭೇಟಿ ನೀಡಲಿದ್ದಾರೆ. ಇದಾದ ನಂತರ ಯಾತ್ರಾರ್ಥಿಗಳು ಹಂಪಿಗೆ ತೆರಳಲಿದ್ದಾರೆ. ಕಿಷ್ಕಿಂಧೆಯು ಹಂಪಿಯ ಪ್ರಾಚೀನ ನಗರವಾಗಿತ್ತು. ಇದರ ನಂತರ, ಯಾತ್ರಾರ್ಥಿಗಳು ಪ್ರವಾಸದ ಕೊನೆಯ ತಾಣವಾದ ರಾಮೇಶ್ವರಂಗೆ ತೆರಳಲಿದ್ದಾರೆ. ಶ್ರೀರಾಮಾಯಣ ಯಾತ್ರೆ ವಿಶೇಷ ರೈಲುಗಳು: ವೇಳಾಪಟ್ಟಿ ಮತ್ತು ನಿಲುಗಡೆ * ಅಯೋಧ್ಯೆ- ಶ್ರೀ ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ದೇವಸ್ಥಾನ, ನಂದಿಗ್ರಾಮ್‌ನಲ್ಲಿರುವ ಭಾರತ ಮಂದಿರ * ಬಿಹಾರ-ಸೀತಾಮರ್ಹಿ, ರಾಮ-ಜಾಂಕಿ ದೇವಸ್ಥಾನ * ವಾರಾಣಾಸಿ, ಪ್ರಯಾಗ, ಚಿತ್ರಕೂಟ ಮತ್ತು ಶೃಂಗವೇರಪುರದಲ್ಲಿರುವ ದೇವಾಲಯಗಳು * ನಾಸಿಕ್- ತ್ರಯಂಬಕೇಶ್ವರ ದೇವಸ್ಥಾನ ಮತ್ತು ಪಂಚವಟಿ
* ಹಂಪಿ- ಕೃಷ್ಕಿಂಧಾ ನಗರ * ರಾಮೇಶ್ವರಂ- ಪ್ರವಾಸದ ಕೊನೆಯ ತಾಣ