ದೇಶದ ಅತಿ ದೊಡ್ಡ ತೈಲ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತದಲ್ಲಿ ಹಸಿರು ವಾಹನ ಕಾರ್ಯಾಚರಣೆಗಳನ್ನು ಉತ್ತೇಜಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ದೇಶಾದ್ಯಂತ 10,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಸಹ ಪ್ರಕಟಿಸಿದೆ.
ಈ ಘೋಷಣೆ ಹೊರ ಬಿದ್ದ ಕೆಲವೇ ದಿನಗಳಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಕಂಪನಿಯು ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಎಂಬ ಹೊಸ ಉತ್ಪನ್ನವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ದೇಶದ ಕೆಲವು ಭಾಗಗಳಲ್ಲಿ ಮಾತ್ರ ಮಾರಾಟವಾಗಲಿದೆ. ದೇಶದ 63 ಪ್ರಮುಖ ನಗರಗಳ 126 ಪೆಟ್ರೋಲ್ ಬಂಕ್ ಗಳಲ್ಲಿ ಮಾತ್ರ ಈ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಮಾರಾಟವಾಗಲಿದೆ.ಪರೀಕ್ಷಾರ್ಥವಾಗಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಮಾರಾಟಕ್ಕೆ ಇಡಲಾಗಿದೆ. ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಶೀಘ್ರದಲ್ಲೇ ದೇಶದ ಇತರ ಭಾಗಗಳಲ್ಲಿಯೂ ಲಭ್ಯವಿರಲಿದೆ ಎಂದು ವರದಿಯಾಗಿದೆ. ಡೀಸೆಲ್ ಅನ್ನು ಡೀಸೆಲ್ ಮಲ್ಟಿ ಫಂಕ್ಷನಲ್ ಸಂಯೋಜಕವಾಗಿ, ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಆಗಿ ಪರಿವರ್ತಿಸಲಾಗಿದೆ. ಈ ಡೀಸೆಲ್ ಇಂಧನ ಮಿತವ್ಯಯವಾಗಿದ್ದು, ಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗಲಿದೆ.
ಈ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ 5% ನಿಂದ 6% ನಷ್ಟು ಹೆಚ್ಚು ಸುಧಾರಿತ ಇಂಧನ ಆರ್ಥಿಕತೆಯನ್ನು ಹೊಂದಿದೆ. ಈ ಡೀಸೆಲ್ ಸಾಂಪ್ರದಾಯಿಕ ಡೀಸೆಲ್‌ಗಿಂತ ಹಲವು ಪಟ್ಟು ಹೆಚ್ಚು ಲಾಭದಾಯಕವಾಗಿದೆ. ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಪ್ರತಿ ಲೀಟರ್‌ಗೆ ಕೇವಲ 130 ಗ್ರಾಂ ನಷ್ಟು ಕಾರ್ಬನ್-ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ. ಕಾರ್ಬನ್ ಮಾನಾಕ್ಸೈಡ್ ಹೊರ ಸೂಸುವಿಕೆ ಪ್ರಮಾಣವು 5.29% ಆದರೆ, ಎನ್‌ಒಎಕ್ಸ್ ಹೊರ ಸೂಸುವಿಕೆ ಪ್ರಮಾಣ 4.99% ನಷ್ಟಾಗಿದೆ.
ಇಂಡಿಯನ್ ಆಯಿಲ್ ಕಂಪನಿಯ ಪ್ರಕಾರ, ಎಕ್ಸ್‌ಟ್ರಾ ಗ್ರೀನ್ ಡೀಸೆಲ್, ಎಂಜಿನ್ ಶಬ್ದವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಡೀಸೆಲ್ ಎನ್‌ಎಸಿಇ ಪ್ರಮಾಣೀಕೃತವಾಗಿದೆ. ಇದರಿಂದ ಹೊಸ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಎಲ್ಲಾ ರೀತಿಯಲ್ಲೂ ವಿಶೇಷವಾದ ಡೀಸೆಲ್ ಆಗಿ ಕಾಣುತ್ತದೆ. ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಜೊತೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ One4U ಎಂಬ ಇಂಧನ ಉಡುಗೊರೆ ಕಾರ್ಡ್ ಅನ್ನು ಸಹ ಪರಿಚಯಿಸಿದೆ.
ಈ ಕಾರ್ಡ್ ಪಾಯಿಂಟ್‌ಗಳಂತಹ ಉಡುಗೊರೆ ನೀಡುತ್ತದೆ. ಈ ಕಾರ್ಡ್ ಮೂಲಕ ಡೀಸೆಲ್, ಪೆಟ್ರೋಲ್'ಗೆ ಹಣ ಪಾವತಿ ಮಾಡಬಹುದು. ಅಗತ್ಯವಿರುವಂತೆ ರೀಚಾರ್ಜ್ ಮಾಡಿ, ಇಂಧನಕ್ಕಾಗಿ ಪಾವತಿಸಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಡಿಜಿಟಲ್ ಹಣ ವರ್ಗಾವಣೆಯನ್ನು ಉತ್ತೇಜಿಸಲು ಈ ಕಾರ್ಡ್ ಅನ್ನು ಪರಿಚಯಿಸಿದೆ. ಇದನ್ನು ಬಳಸಿಕೊಂಡು ಪಾವತಿ ಮಾಡಿದರೆ ರಿವಾರ್ಡ್ ಪಾಯಿಂಟ್ ಹಾಗೂ ವೋಚರ್ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಪರಿಚಯಿಸುವ ಕುರಿತು ಮಾತನಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ರವರು, ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿ, ಭಾರತವನ್ನು ಹಸಿರಿನತ್ತ ಕೊಂಡೊಯ್ಯುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಈ ಕ್ರಮವು ಭಾರತವನ್ನು ಹಸಿರು ಚಳವಳಿಯತ್ತ ವೇಗವಾಗಿ ಚಲಿಸುವ ಗುರಿಯನ್ನು ಹೊಂದಿವೆ. ಇದನ್ನು ಖಚಿತಪಡಿಸಿ ಕೊಳ್ಳಲು 3 ವರ್ಷಗಳಲ್ಲಿ ದೇಶಾದ್ಯಂತ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಹಾಗೂ 10 ಸಾವಿರ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಮುಂದಿನ ಒಂದು ವರ್ಷದಲ್ಲಿ 2,000 ಚಾರ್ಜಿಂಗ್ ಕೇಂದ್ರಗಳು, ಎರಡನೇ ವರ್ಷದಲ್ಲಿ 8000 ಚಾರ್ಜಿಂಗ್ ಕೇಂದ್ರಗಳು ಹಾಗೂ ಮೂರನೇ ವರ್ಷದಲ್ಲಿ 10,000 ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗುವುದು. ಇನ್ನು ಸಾರ್ವಕಾಲಿಕ ಗರಿಷ್ಠ ಬೆಲೆ ಹೊಂದಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಇಂಧನ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಾಹನ ಸವಾರರ ನೆರವಿಗೆ ಧಾವಿಸಿದೆ. ಕೇಂದ್ರ ಸರ್ಕಾರವು ಇಂಧನಗಳ ವಿಧಿಸಲಾಗುವ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ವಾಹನ ಸವಾರರಿಗೆ ದೀಪಾವಳಿ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 5 ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ರೂ.10 ಅಬಕಾರಿ ಸುಂಕ ಕಡಿಮೆ ಮಾಡಿದೆ. ಅಬಕಾರಿ ಸುಂಕ ಕಡಿತಗೊಂಡ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 107.64 ಗಳಾದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 92.03 ಗಳಾಗಿದೆ. ಕೇಂದ್ರ ಸರ್ಕಾರವು ಅಬಕಾರಿ ಸುಂಕ ಕಡಿತಗೊಳಿಸುತ್ತಿದ್ದಂತೆ ಕರ್ನಾಟಕ ಸರ್ಕಾರವು ಸಹ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಕರ್ನಾಟಕ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲಿಗೆ ರೂ. 6.29 ಹಾಗೂ ಪ್ರತಿ ಲೀಟರ್ ಡೀಸೆಲ್'ಗೆ ರೂ. 12.47 ಇಳಿಕೆ ಮಾಡಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇಂಧನದ ಮೇಲೆ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು ಕಡಿಮೆ ಮಾಡಿರುವುದರಿಂದ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು ಬರಲಿದೆ.