ಕಾಸರಗೋಡು: ಜುವೆನೆಲ್ ಹೋಂನ ಮಕ್ಕಳಿಗೆ ತರಕಾರಿ ಕೃಷಿ ನಡೆಸಲು ಕೃಷಿ ಇಲಾಖೆ ಅವಕಾಶ ಒದಗಿಸಿದೆ. ಇಲಾಖೆಯ ಯೋಜನಾವಿಷ್ಕøತ ತರಕಾರಿ ಕೃಷಿಯ ಅಂಗವಾಗಿ ಈ ಕಾರ್ಯಕ್ರಮ ಆರಂಭಿಸಲಾಗಿದೆ. ಗ್ರೋ ಬ್ಯಾಗ್ ಗಳು, ಕ್ಯಾಬೇಜ್, ಹಸಿಮೆಣಸು, ಬದನೆ ಸಹಿತ ತರಕಾರಿ ಸಸಿಗಳನ್ನು , ಬೆಂಡೆ, ಕುಂಬಳಕಾಯಿ, ಸೌತೆ ಸಹಿತ ಬೀಜಗಳನ್ನು ಕೃಷಿಗಾಗಿ ಇಲ್ಲಿನ ಮಕ್ಕಳಿಗೆ ವಿತರಿಸಲಾಗಿದೆ. ಹದಿನೈದು ಮಂದಿ ಮಕ್ಕಳು ಜುವೆನೈಲ್ ಹೋಮ್‍ನಲ್ಲಿ ಕಳೆಯುತ್ತಿದ್ದು, ಇವರೆಲ್ಲರೂ ಉತ್ಸಾಹದಿಂದ ತರಕಾರಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಪಂಪು ಸೆಟ್ ಖರಿದಿಗೆ 21 ಸಾವಿರ ರೂ. ನೀಡಲಾಗಿದೆ. ಜುವೆನೈಲ್ ಹೋಂ ವಠಾರದಲ್ಲಿರುವ ತೆರೆದ ಬಾವಿಯಿಂದ ಪಂಪ್‍ಸೆಟ್ ಅಳವಡಿಸಿ ನೀರು ಸಿಂಪಡಿಸುವ ಮೂಲಕ ತರಕಾರಿ ಕೃಷಿ ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರೋಬ್ಯಾಗ್ ಜತೆಗೆ ಮಣ್ಣಿನಲ್ಲಿ ಸಾಲು ಮಾಡಿ ತರಕಾರಿ ಕೃಷಿಯನ್ನು ನಡೆಸಲಾಗುತ್ತಿದೆ.
ಕೆಲವೊಂದು ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಮಕ್ಕಳನ್ನು ಜುವೆನೈಲ್ ಹೋಮ್‍ಗೆ ದಾಖಲಿಸಲಾಗಿದ್ದು, ತರಕಾರಿ ಕೃಷಿ ಹಾಗೂ ಇತರ ಚಟುವಟಿಕೆಗಳಿಂದ ಮಕ್ಕಳಲ್ಲಿನ ಅಪರಾಧ ಮನೋಭಾವ ಕಡಿಮೆಮಾಡಲು ಯತ್ನಿಸಲಾಗುವುದು ಎಂದು ಜುವೆನೈಲ್ ಹೋಮ್ ಅಧಿಕಾರಿಗಳು ತಿಳಿಸುತ್ತಾರೆ.