ಮಂಜೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿತ್ಯ ಶಾಖೆಯಿಂದ ವ್ಯಕ್ತಿತ್ವ ನಿರ್ಮಾಣದ ಮಹಾನ್ ಕಾರ್ಯ ಜರಗುತ್ತಿದೆ, ಶಾಖೆಯಲ್ಲಿ ದೊರೆಯುವ ನಿತ್ಯ ವ್ಯಾಯಾಮ, ಯೋಗ, ಆಟ, ಹಾಡು ವಚನಗಳಿಂz ಆರೋಗ್ಯವಂತ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ. ಕಳೆದ ತೊಂಬತ್ತೇಳು ವರ್ಷಗಳಿಂದ ವಿಶ್ವದಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಸಹಸ್ರಾರು ಶಾಖೆಗಳನ್ನು ಹೊಂದಿದ್ದು ವಿವಿಧ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸಮರ್ಪಸಿ ಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿ ಮಂಡಳಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೀಯಪದವು ಶಾಖಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೌದ್ದಿಕ್ ನಡೆಸಿ ಮಾತನಾಡುತ್ತಿದ್ದರು.
ಬಲಿಷ್ಟ ಹಿಂದೂ ಸಮಾಜದ ಸ್ಥಾಪನೆಯಲ್ಲಿ ಆರ್‍ಎಸ್‍ಎಸ್ ನ ಕೊಡುಗೆ ಮಹತ್ವವಾದದ್ದು, ಕಳೆದ ಐವತ್ತು ವರ್ಷಗಳಿಂದ ಮೀಯಪದವಿನಂತ ತೀರಾ ಹಳ್ಳಿ ಪ್ರದೇಶದಲ್ಲೂ ಹತ್ತುಹಲವು ವಿರೋಧದದ ನಡುವೆಯೂ ನಿತ್ಯ ಶಾಖೆ ನಡೆಸುತ್ತಾ ಬಂದಿದೆ. ತುರ್ತು ಪರಿಸ್ಥಿತಿ ಹೋರಾಟದಲ್ಲೂ ಮೀಯಪದವಿನ ಸ್ವಯಂಸೇವಕರು ಮುಂಚೂಣಿಯಲ್ಲಿದ್ದು ಕಾರಾಗೃಹ ವಾಸವನ್ನೂ ಅನುಭವಿಸಿ ಕೆಚ್ಚೆದೆಯಿಂದ ಎದುರಿಸಿದ್ದಾರೆ, ಅಯೋಧ್ಯಾ ಕರಸೇವೆಯಲ್ಲೂ ಭಾಗವಹಿಸಿದ್ದಾರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಮುಂದಿನ ಮೂರು ವರ್ಷಗಳಲ್ಲಿ ನಡೆಯಲಿದ್ದು ಇನ್ನಷ್ಟು ಸ್ಪೂರ್ತಿಯಿಂದ ಸಮರ್ಪಣಾ ಮನೋಭಾವದಿಂದ ಸಂಘದ ಕಾರ್ಯ ಜರಗಬೇಕಿದೆ, ಜಾಗೃತ ಹಿಂದೂ ಸಮಾಜ ಇನ್ನಷ್ಟು ಶಾಖಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಂತಾಗಲಿ ಎಂದು ಹಾರೈಸಿದರು.
ಮಂಜೇಶ್ವರ ಉಪಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಎಂ.ಜಿ. ನಾರಾಯಣ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾರಂಭಕ್ಕೆ ಶುಭ ಹಾರೈಸಿದರು. ಜ್ಞಾನೇಶ ಮೀಯಪದವು ಸ್ವಾಗತಿಸಿ ನಂದೇಶ ಮೀಯಪದವು ವಂದಿಸಿದರು. ಹರೀಶ್ ಮೀಯಪದವು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಯೋಗ,ನಿಯುದ್ಧ ದಂಡ ಇತ್ಯಾದಿ ಒಂಭತ್ತು ರೀತಿಯ ಶಾರೀರಿಕ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೀಯಪದವು ಶಾಖಾ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ, ಯೋಗ ವ್ಯಾಯಾಮ, ಕ್ರೀಡಾ ಪ್ರಾತ್ಯಕ್ಷಿಕೆ ಜರಗಿತು. ಹಿಂದೂ ಸಮಾಜದ ನೂರಾರು ಬಂಧುಗಳು ಮಹಿಳೆಯರು ಕಾರ್ಯಕ್ರಮ ವೀಕ್ಷಿಸಿದರು.