ತಿರುವನಂತಪುರ: ಒಂದು ವರ್ಷದೊಳಗೆ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಸಂಪೂರ್ಣವಾಗಿ ಸ್ಮಾರ್ಟ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್.ಅನಿಲ್ ಹೇಳಿದ್ದಾರೆ. ಹೆಚ್ಚಿನ ದಿನಸಿ ಮತ್ತು ಇತರ ಉತ್ಪನ್ನಗಳನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸಲಾಗುವುದು. ಇದನ್ನು ಇನ್ನಷ್ಟು ಜನಪರವಾಗಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು. ತಿರುವನಂತಪುರದಲ್ಲಿ ಸಾರ್ವಜನಿಕ ವಿತರಣಾ ಇಲಾಖೆ ಹೊಸದಾಗಿ ಸಿದ್ಧಪಡಿಸಿರುವ ಎಟಿಎಂ ಕಾರ್ಡ್‌ಗಳ ರೂಪದಲ್ಲಿ ಪಡಿತರ ಚೀಟಿ ವಿತರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆಯು NFSA ಗೋದಾಮುಗಳನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ. ಇದರ ಭಾಗವಾಗಿ ಗೋದಾಮುಗಳಿಂದ ಪಡಿತರ ವಿತರಿಸುವ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಲಾಗುವುದು. 2022ರ ಜನವರಿ ವೇಳೆಗೆ ಸಾರ್ವಜನಿಕ ವಿತರಣಾ ಇಲಾಖೆ ವ್ಯಾಪ್ತಿಯ ಎಲ್ಲ ಕಚೇರಿಗಳಲ್ಲಿ ಯೋಜನೆ ಜಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.