ಕಾಸರಗೋಡು: ಮಕ್ಕಳಿಗಾಗಿ ತಯಾರಿಸಿದ ಚಿತ್ರ 'ನನ್ ಹೆಸರು ಕಿಶೋರ ಏಳು ಪಾಸ್ ಎಂಟು' ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ನ. 19ರಂದು ಬಿಡುಗಡೆಗೊಳ್ಳಲಿರುವುದಾಗಿ ಚಿತ್ರ ನಟ ಸಾಯಿಕೃಷ್ಣ ಕಾಸರಗೋಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮದ್ಯ, ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸುವ ಹಾಗೂ ಮಾದಕದ್ರವ್ಯದ ದಾಸರಾದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಬಗೆಗಿನ ಸಂದೇಶವನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ. 2019-20ನೇ ಸಾಲಿನಲ್ಲಿ ಬೆಂಗಳೂರು ಇಂಟರ್‍ನ್ಯಾಶನಲ್ ಫಿಲಿಮ್ಸ್ ಫೆಸ್ಟಿವಲ್‍ನಲ್ಲಿ ಪ್ರಸಕ್ತ ಚಿತ್ರ ಪ್ರದರ್ಶನಗೊಂಡಿದ್ದು, ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಬಗ್ಗೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದೂ ಸಿನಿಮಾದ ಗುರಿಯಾಗಿದೆ ಎಂದು ತಿಳಿಸಿದರು.
ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಟಿಸಿರುವ ಸಾಯಿಕೃಷ್ಣ ಅವರು ಚಿತ್ರದಲ್ಲಿ ಅಭಿನಯಿಸಿದ್ದು, ಪದಿ ಫಿಲ್ಮ್ ಬ್ಯಾನರ್‍ನಲ್ಲಿ ಎಂ.ಡಿ ಪಾರ್ಥಸಾರಥಿ ಚಿತ್ರ ನಿರ್ಮಾಣಮಾಡಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಮೇಶ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.