ಕುಂಬಳೆ: ಇತ್ತೀಚೆಗಿನ ಬೆಳವಣಿಗೆಗಳಲ್ಲಿ ಕುಂಬಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ 40 ವರ್ಷಗಳ ಅನುಭವ ಇರುವ ಕೆ.ಸಾಮಿಕುಟ್ಟಿಯವರನ್ನು ಯಾವುದೇ ಬ್ಲಾಕ್ ಪದಾಧಿಕಾರಿಗಳ, ಕೆಪಿಸಿಸಿ ಸದಸ್ಯರ ಅಭಿಪ್ರಾಯವನ್ನು ಕೇಳದೆ ಏಕಾಏಕಿ ಬದಲಿಸಿದ ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಅವರ ತೀರ್ಮಾನ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ.
ಪೈವಳಿಕೆ ಮಂಡಲ ಅಧ್ಯಕ್ಷರ ನೇಮಕಾತಿಯಲ್ಲಿಯೂ ಡಿಸಿಸಿ ಅಧ್ಯಕ್ಷರು ಪಕ್ಷಪಾತ ಧೋರಣೆಯನ್ನು ಮಾಡಿದ್ದಾರೆಂದು ಪೈವಳಿಕೆಯ ಕಾರ್ಯಕರ್ತರು ದೂರಿಕೊಂಡಿದ್ದಾರೆ. ಪೈವಳಿಕೆಯಲ್ಲಿ ಶಬ್ಬೀರ್ ಮದನಕೋಡಿ ತಾತ್ಕಾಲಿಕ ಅಧ್ಯಕ್ಷರಾಗಿರುವಾಗಲೇ ಹೊಸದಾಗಿ ಇನ್ನೊಬ್ಬ ತಾತ್ಕಾಲಿಕ ಅಧ್ಯಕ್ಷರನ್ನು ಮಂಡಲ ಕಾರ್ಯಕರ್ತರ ತೀರ್ಮಾನದ ವಿರುದ್ಧ ನೇಮಕಾತಿ ಮಾಡಿದ್ದಾರೆ. ಡಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿಯೇ ನಾರಾಯಣ ಏದಾರ್ ರವರನ್ನು ಒಮ್ಮತಾಭಿಪ್ರಾಯದಿಂದ ಆಯ್ಕೆ ಮಾಡಲಾಗಿದ್ದು, ಆದರೆ ಇದೀಗ ಮೋಹನ ರೈಯವರಿಗೆ ತಾತ್ಕಾಲಿಕ ಜವಾಬ್ದಾರಿ ನೀಡಿರುವುದು, ಡಿಸಿಸಿ ಅಧ್ಯಕ್ಷರೇ ಗುಂಪುಗಾರಿಕೆಗೆ ನೇತೃತ್ವ ನೀಡುತ್ತಿದ್ದಾರೆಂದು ಕಾರ್ಯಕರ್ತರು ದೂರಿದ್ದಾರೆ.
ಈ ಕುರಿತು ಬಂದ ಎಲ್ಲಾ ದೂರುಗಳಿಗೆ ನ.17 ತಾರೀಕಿನೊಳಗೆ ಪರಿಹಾರ ಮಾಡುವುದಾಗಿ ಹೇಳಿದ ಡಿಸಿಸಿ ಅಧ್ಯಕ್ಷರು ಇದೀಗ ಮೌನವಾಗಿದ್ದಾರೆಂದು ಕಾರ್ಯಕರ್ತರು ದೂರಿದ್ದಾರೆ. ಈ ಕುರಿತು ಕೆಪಿಸಿಸಿ ಹಾಗೂ ಎಐಸಿಸಿಗೆ ದೂರು ನೀಡಲಾಗಿದೆ. ಕುಂಬಳೆ ಬ್ಲಾಕ್ ಅಧ್ಯಕ್ಷಗಾದಿಗೆ ಮಂಜುನಾಥ ಆಳ್ವ, ಸುಂದರ ಆರಿಕ್ಕಾಡಿ, ರವಿ ಪೂಜಾರಿ, ಆಮು ಅಡ್ಕಸ್ಥಳ, ರವಿಂದ್ರ ಮಾಸ್ತರ್ ರಂತಹ ಹಿರಿಯರನ್ನು ಅವಗಣಿಸಿ, ಇತ್ತೀಚೆಗಷ್ಟೆ ಪಕ್ಷಕ್ಕೆ ಸೇರ್ಪಡೆಗೊಂಡ ಲಕ್ಷ್ಮಣ ಪ್ರಭುವನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿರುವುದು ಗುಂಪುಗಾರಿಕೆ ಭಾಗವಾಗಿದೆಯೆಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಅಭಿಮತ:
ಈ ಭಿನ್ನಾಭಿಪ್ರಾಯಗಳನ್ನು ಡಿಸಿಸಿಯು ಕೆಪಿಸಿಸಿಗೆ ತಿಳಿಸಿದ್ದು, ಶೀಘ್ರ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷದ ಹಿತದೃಷ್ಟಿಯಿಂದ ಯಾವುದೇ ಗುಂಪುಗಾರಿಕೆಗೆ ಒಳಗಾಗದೆ ತೀರ್ಮಾನ ಕೈಗೊಳ್ಳಲಾಗುವುದು.
-ನ್ಯಾಯವಾದಿ ಐ.ಸುಬ್ಬಯ್ಯ ರೈ
ಕೆಪಿಸಿಸಿ ಕಾರ್ಯದರ್ಶಿ