ತಿರುವನಂತಪುರಂ: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕವೆಂದು ಘೋಷಣೆಯಾಗಿ ಒಂಬತ್ತು ತಿಂಗಳಲ್ಲಿ ಜನನ ಪ್ರಮಾಣ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, 2020ರ ಮಾರ್ಚ್ ನಂತರ ಕೇರಳದಲ್ಲಿ ಜನನ ಪ್ರಮಾಣ ತೀವ್ರ ಇಳಿಕೆಯಾಗಿರುವುದಾಗಿ ವರದಿಯಾಗಿದೆ.
ಕೇರಳ ಸರ್ಕಾರದ ಮಾಹಿತಿ ಪ್ರಕಾರ, ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಜನನ ಪ್ರಮಾಣ ಕುಸಿದಿದೆ. ಲಾಕ್‌ಡೌನ್ ಸಮಯದಲ್ಲಿ ದಂಪತಿ ಮನೆಯಲ್ಲಿಯೇ ಉಳಿಯುವುದರಿಂದ ಸಂತಾನೋತ್ಪತ್ತಿ ಕ್ರಿಯೆಗೆ ಅನುವಾಗಲಿದೆ, ಅದರಿಂದ ಜನನ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿತ್ತು.
2020ರ ಜುಲೈನಲ್ಲಿ ಕೇರಳದಲ್ಲಿ 37,138 ಮಕ್ಕಳು ಹುಟ್ಟಿರುವುದು ದಾಖಲಾಗಿದೆ. ಆದರೆ, ಕೋವಿಡ್ ಸಾಂಕ್ರಾಮಿಕದ ನಂತರ 2021ರ ಜುಲೈನಲ್ಲಿ ಜನನ ಸಂಖ್ಯೆ 10,684ಕ್ಕೆ ಇಳಿಕೆಯಾಗಿದೆ. ಈ ವರ್ಷದ ಮೊದಲ ಒಂಬತ್ತು ತಿಂಗಳು ಜನನ ಪ್ರಮಾಣ ತೀವ್ರ ಇಳಿಕೆಯಾಗಿರುವುದು ಕಂಡು ಬಂದಿದೆ. 2020ರ ಜನವರಿಯಲ್ಲಿ 36,414 ಮಕ್ಕಳು ಹುಟ್ಟಿದ್ದರೆ, 2021ರ ಜನವರಿಯಲ್ಲಿ 30,335 ಮಕ್ಕಳು ಜನಿಸಿವೆ. ಇದೇ ಸೆಪ್ಟೆಂಬರ್‌ನಲ್ಲಿ ಅತ್ಯಂತ ಕಡಿಮೆ ಜನನ ಪ್ರಮಾಣ ದಾಖಲಾಗಿರುವುದು ಕೇರಳದ ಜನನ ಮತ್ತು ಮರಣಗಳ ಮುಖ್ಯ ರೆಜಿಸ್ಟ್ರಾರರ ಮಾಹಿತಿಯಿಂದ ತಿಳಿದು ಬಂದಿದೆ.
ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯುನಿಸೆಫ್) 2020ರ ಮಾರ್ಚ್‌ನ ವರದಿಯ ಪ್ರಕಾರ, ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕದ 40 ವಾರಗಳ ಅವಧಿಯಲ್ಲಿ 11.6 ಕೋಟಿ ಮಕ್ಕಳ ಜನನವಾಗಲಿದೆ ಎಂದು ಅಂದಾಜಿಸಲಾಗಿತ್ತು.