ಕಾಬೂಲ್: ಭಾರತ ಸೇರಿದಂತೆ ಯಾವುದೇ ದೇಶದೊಂದಿಗೆ ಸಂಘರ್ಷವನ್ನು ಅಫ್ಘಾನಿಸ್ತಾನ ಬಯಸುವುದಿಲ್ಲ ಎಂದು ಯುದ್ಧಪೀಡಿತ ದೇಶದ ತಾಲಿಬಾನ್ ನೇತೃತ್ವದ ಹಂಗಾಮಿ ಸರ್ಕಾರದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಹೇಳಿದ್ದಾರೆ.ಬಿಬಿಸಿ ಉರ್ದು ಜೊತೆ ಮಾತನಾಡುವಾಗ ಮುತ್ತಕಿ ಈ ರೀತಿಯ ಹೇಳಿಕೆ ನೀಡಿದ್ದಾನೆ.
ಇದು ಮಹಿಳಾ ಪತ್ರಕರ್ತರೊಬ್ಬರೊಂದಿಗೆ ನಡೆಸಿದ ಮೊದಲ ಸಂದರ್ಶನವಾಗಿದೆ. ತಾಲಿಬಾನ್ ಸರ್ಕಾರದ ಅಡಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಣ ಸಂಬಂಧ ಬಗ್ಗೆ ಪತ್ರಕರ್ತೆ ಕೇಳಿದ್ದಾಗ ಮುತ್ತಕಿ ಈ ರೀತಿಯ ಪ್ರತಿಕ್ರಿಯಿದ್ದಾನೆ. ಅಫ್ಘಾನಿಸ್ತಾನ ಬೇರೆ ಯಾವುದೇ ದೇಶದೊಂದಿಗೆ ಸಂಘರ್ಷವನ್ನು ಹೊಂದಲು ಅಥವಾ ನಮ್ಮ ರಾಷ್ಟ್ರದ ಮೇಲೆ ಪರಿಣಾಮ ಬೀರುವ ಸವಾಲುಗಳನ್ನು ಹೊಂದಲು ನಾವು ಬಯಸುವುದಿಲ್ಲ. ಆದ್ದರಿಂದ, ನಾವು ಈ ವಿಷಯದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.
ಅಫ್ಘಾನಿಸ್ತಾನವು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ಬಗ್ಗೆ ಚೀನಾ ಅಥವಾ ಪಾಕಿಸ್ತಾನದಿಂದ ಪ್ರತಿಕ್ರಿಯೆ ಬಂದಿದ್ದೇಯೆ ಎಂಬ ಪ್ರಶ್ನೆಗೆ ನೇರ ಉತ್ತರದ ಬದಲಿಗೆ, ಮಾಸ್ಕೋದಲ್ಲಿ ಇತ್ತೀಚಿನ ಸಭೆಗಳನ್ನು ಮುತ್ತಕಿ ಉಲ್ಲೇಖಿಸಿದರು. ಮಾಸ್ಕೋ ಸಮ್ಮೇಳನದಲ್ಲಿ ನಾವು ಭಾಗವಹಿಸಿದಾಗ, ಭಾರತ, ಪಾಕಿಸ್ತಾನ ಮತ್ತು ಹಲವಾರು ಇತರ ದೇಶಗಳ ಪ್ರತಿನಿಧಿಗಳು ಸಹ ಉಪಸ್ಥಿತರಿದ್ದರು. ನಾವು ಸಕಾರಾತ್ಮಕ ಮಾತುಕತೆ ನಡೆಸಿದ್ದೇವೆ ಮತ್ತು ಯಾವುದೇ ದೇಶವನ್ನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು.
ಇರಾನ್, ಕಝಾಕಿಸ್ತಾನ್, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಅಧಿಕಾರಿಗಳು ಭಾಗವಹಿಸಿದ್ದ ನವದೆಹಲಿಯಲ್ಲಿ ಅಫ್ಘಾನಿಸ್ತಾನದ ಕುರಿತು ಎಂಟು ರಾಷ್ಟ್ರಗಳ ಸಂವಾದದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆ ವಹಿಸಿದ ಕೆಲವು ದಿನಗಳ ನಂತರ ಅವರ ಸಂದರ್ಶನ ಆಗಿದೆ.
ಅಫ್ಘಾನಿಸ್ತಾನ ಕುರಿತಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಇರಾನ್, ಕಝಾಕಿಸ್ತಾನ್, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಅಧಿಕಾರಿಗಳ ಮಾತುಕತೆ ನಡೆದ ನಂತರ
ಅಮೀರ್ ಖಾನ್ ಮುತ್ತಕಿ ಸಂದರ್ಶನ ನಡೆಸಲಾಗಿದೆ.
ಮಹಿಳಾ ಶಿಕ್ಷಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತ್ತಕಿ, ಅಫ್ಘಾನ್ ಮಹಿಳೆಯರನ್ನು ವಿವಿಧ ಕ್ಷೇತ್ರಗಳಿಂದ ಹೊರಗಿಡಲಾಗುತ್ತಿದೆ ಎಂಬುದನ್ನು ನಿರಾಕರಿಸಿದರು. ಮಹಿಳೆಯರು ಆರೋಗ್ಯ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ತೊಡಗಿಸಿಕೊಂಡಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲೂ ಬೋಧನೆ ಮಾಡುತ್ತಿದ್ದಾರೆ. ಅಗತ್ಯವಿರುವ ಪ್ರತಿಯೊಂದು ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮುತ್ತಕಿ ತಿಳಿಸಿದ್ದಾರೆ.