ಕಾಸರಗೋಡು: ಪಂಚಾಯತ್ ಮಟ್ಟದಲ್ಲಿ ಕ್ರೀಡಾ ಕೌನ್ಸಿಲ್ ಗಳ ರಚನೆ ಮೂಲಕ ಜಿಲ್ಲಾ ಕ್ರೀಡಾ ಕೌನ್ಸಿಲ್ ಗಳ ಹೊಣೆ ಹೆಚ್ಚಲಿದ್ದು, ಕ್ರೀಡಾ ವಲಯದ ಮೂಲಭೂತ ಸೌಲಭ್ಯಗಳು ಅಭಿವೃದ್ಧಿಗೊಂಡು ಗುಣಮಟ್ಟ ಹೆಚ್ಚಲಿದೆ ಎಂದು ರಾಜ್ಯ ಕ್ರೀಡಾ ಮಂಡಳಿ ಉಪಾಧ್ಯಕ್ಷ ಒ.ಕೆ.ಬಿನೀಷ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಕ್ರೀಡಾ ಮಂಡಳಿಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದಲ್ಲಿ ಕ್ರೀಡಾ ವಲಯದ ಅಭಿವೃದ್ಧಿಗೆ ಹೇರಳ ಚಟುವಟಿಕೆಗಳು ನಡೆದುಬರುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ನಡೆಸುವಷ್ಟು ರಾಜ್ಯವನ್ನು ಮಾರ್ಪಡಿಸುವ ಯತ್ನ ಸಾಗುತ್ತಿದೆ ಎಂದವರು ತಿಳಿಸಿದರು.
ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯ ವಿಚಾರದಲ್ಲಿ ಪ್ರಗತಿ ಸಾಧಿಸಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಅನೇಕ ವಿಚಾರಗಳು ಜಾರಿಗೊಂಡಿವೆ ಎಂದವರು ನುಡಿದರು.
ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯರಾದ ಅನಿಲ್ ಬಂಗಳಂ, ಟಿ.ವಿ.ಕೃಷ್ಣನ್, ಪಳ್ಳಂ ನಾರಾಯಣನ್, ವಿ.ವಿ.ವಿಜಯಮೋಹನ್ ಮೊದಲಾದವರು ಉಪಸ್ಥಿತರಿದ್ದರು.