ನವದೆಹಲಿ: ಕೋವಿಡ್-19 ಲಸಿಕೆ ಅಭಿಯಾನವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಲಸಿಕೆ ಅಭಿಯಾನವನ್ನು ಹೆಚ್ಚಿಸಲು ನವೀನ ಮಾರ್ಗಗಳನ್ನು ಅಳವಡಿಸಿಕೊಳ್ಳುವಂತೆ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳ ಅಧಿಕಾರಿಗಳಿಗೆ ಬುಧವಾರ ಸೂಚಿಸಿದ್ದಾರೆ.
ಇಂದು ಕಡಿಮೆ ಲಸಿಕೆ ವ್ಯಾಪ್ತಿಯನ್ನು ಹೊಂದಿರುವ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇದುವರೆಗೂ ನೀವು ಲಸಿಕಾ ಕೇಂದ್ರದ ಬಳಿಗೆ ಜನರನ್ನು ಕರೆತರುತ್ತಿದ್ದಿರಿ. ಈಗ ನೀವೇ ಪ್ರತಿ ಮನೆಗೂ ತೆರಳಿ ಲಸಿಕೆ ನೀಡುವ ಮೂಲಕ ‘ಹರ್ ಘರ್ ದಸ್ತಕ್ ಆಂದೋಲನ‘ದೊಂದಿಗೆ ಕೈಜೋಡಿಸಬೇಕು‘ ಎಂದು ಹೇಳಿದರು.
ಇತ್ತೀಚೆಗೆ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಭೇಟಿಯನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ‘ಲಸಿಕೆ ಅಗತ್ಯ ಕುರಿತು ಧಾರ್ಮಿಕ ನಾಯಕರ ಮೂಲಕ ಜನರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು‘ ಎಂದರು.
ಕೋವಿಡ್-19 ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವದಂತಿಗಳ ವಿರುದ್ಧ ಹೋರಾಡಲು ಸ್ಥಳೀಯ ಧಾರ್ಮಿಕ ಮುಖಂಡರ ಸಹಾಯವನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳನ್ನು ಸೂಚಿಸಿದರು.
ಲಸಿಕೆ ಹಾಕದವರಿಗೆ ಮೊದಲ ಡೋಸ್ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ಆದರೆ ಎರಡನೇ ಡೋಸ್‌ಗೂ ಅಷ್ಟೇ ಗಮನ ನೀಡಬೇಕು ಎಂದು ಪ್ರಧಾನಿ ಅಧಿಕಾರಿಗಳಿಗೆ ಹೇಳಿದರು.