ಬೆಂಗಳೂರು: ಪ್ರಖ್ಯಾತ ವಿದ್ವಾಂಸರು ಹಾಗೂ ನಮ್ಮ ಅಂಕಣಕಾರರೂ ಆಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು (86) ತಡರಾತ್ರಿ 2 ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕಾನಕಾನ್ಹಳ್ಳಿ ಶ್ರೀನಿವಾಸ ದೇಶಿಕಾಚಾರ್ಯ ನಾರಾಯಣಾಚಾರ್ಯರು ( ಡಾ. ಕೆ.ಎಸ್.ಎನ್) ಇಂದು ಬೆಳಗಿನ ಜಾವ 2.06 ಗಂಟೆಗೆ ಆಚಾರ್ಯರ ತಿರುವಡಿಗಳ ಮೂಲಕ ಭಗವಂತನ ಪಾದಕಮಲಗಳನ್ನು ಸೇರಿದರೆಂದು ತಿಳಿಸಲು ವಿಷಾದಿಸುತ್ತೇವೆ. ಅಂತ್ಯೇಷ್ಟಿಗಳು ಪೂಜ್ಯರ ಸ್ವಗೃಹದಲ್ಲಿ ನಡೆಯುತ್ತವೆ ಎಂದು ಕುಟುಂಬ ಹೇಳಿದೆ.
ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಜಲದರ್ಶಿನಿ ಲೇಔಟ್ನಲ್ಲಿರುವ ನಾರಾಯಣಾಚಾರ್ಯರ ನಿವಾಸದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ.
ನಾರಾಯಣಾಚಾರ್ಯ ಅವರು 1933 ಅಕ್ಟೋಬರ್ 30 ರಂದು ಕನಕನಹಳ್ಳಿಯಲ್ಲಿ (ಈಗಿನ ಕನಕಪುರ, ಕರ್ನಾಟಕ, ಬೆಂಗಳೂರು ಜಿಲ್ಲೆ) ಕೆ.ಎನ್ ಶ್ರೀನಿವಾಸ ದೇಶಿಕಾಚಾರ್ಯ ಮತ್ತು ರಂಗನಾಯಕಮ್ಮ ದಂಪತಿಗಳಿಗೆ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮತ್ತು ಯುವರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಬಿಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ), ಬಿ.ಎ. (ಆನರ್ಸ್) ಇಂಗ್ಲಿಷ್, ಮತ್ತು ಎಂಎ (ಆಧುನಿಕ ಇಂಗ್ಲಿಷ್ ಸಾಹಿತ್ಯ) ಮಾಡಿದ್ದಾರೆ.
'ಡಬ್ಲ್ಯೂಬಿ ಯೀಟ್ಸ್ ಮತ್ತು ಟಿಎಸ್ ಎಲಿಯಟ್ ಅವರ ಕಾವ್ಯದ ಮೇಲೆ ಭಾರತೀಯ ಚಿಂತನೆಯ ಪ್ರಭಾವ' ಎಂಬ ವಿಷಯದ ಮೇಲೆ ನಾರಾಯಣಾಚಾರ್ಯ ಅವರು ಡಾಕ್ಟರೇಟ್ ಪ್ರಬಂಧ (ಯುಜಿಸಿ ಫೆಲೋಶಿಪ್ 1959-1961) ಮಂಡಿಸಿದ್ದಾರೆ.
ರಾಮಾಯಣಕ್ಕೆ ಸಂಬಂಧಿಸಿದ ಕೃತಿಗಳು ಹಾಗೂ ಪ್ರವಚನಗಳಿಂದ ಪ್ರಖ್ಯಾತಿ ಪಡೆದಿದ್ದ ಡಾ.ಕೆಎಸ್ ನಾರಾಯಣಾಚಾರ್ಯ ಅವರು ರಾಮಾಯಣಾಚಾರ್ಯ ಎಂದೇ ಖ್ಯಾತಿ ಗಳಿಸಿದ್ದರು.
ಆಚಾರ್ಯ ಚಾಣಕ್ಯ, ರಾಮಾಯಣಸಹಶ್ರೀ, ವಾಲ್ಮೀಕಿ ಯಾರು? ಗಾಂಧೀಜಿಯನ್ನು ನಿಜವಾಗಿ ಕೊಂದವರು ಯಾರು? ಮುಂತಾದ ಕೃತಿಗಳನ್ನು ರಚಿಸಿದ್ದ ಡಾ.ಕೆಎಸ್ ನಾರಾಯಣಾಚಾರ್ಯ ರಾಷ್ಟ್ರೀಯತೆ-ಹಿಂದೂ ಧರ್ಮ, ಸಂಸ್ಕೃತಿಗಳ ಪ್ರಖರ ಪ್ರತಿಪಾದಕರಾಗಿದ್ದರು.
ನಾರಾಯಣಾಚಾರ್ಯ ಅವರ ಅಗಲಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಂತಾಪ ಸೂಚಿಸಿದ್ದಾರೆ. "ಪ್ರಖ್ಯಾತ ವಿದ್ವಾಂಸರು ಹಾಗೂ ಅನೇಕ ಪೌರಾಣಿಕ ಕಾದಂಬರಿಗಳ ರಚನಾಕಾರರಾಗಿದ್ದ ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ನಿಧನ ನೋವಿನ ಸಂಗತಿ. ಪ್ರವಚನ ಮತ್ತು ಕಾದಂಬರಿಕಾರರಾಗಿ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಜೋಶಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.