ಕೊಟ್ಟಾಯಂ: ಪಿಎಚ್‌ಡಿ ಅಭ್ಯರ್ಥಿಯ ವಿರುದ್ಧ ಜಾತಿ ನಿಂದನೆ ಹೇಳಿಕೆಗಳನ್ನು ನೀಡಿದ್ದ ಆರೋಪದಲ್ಲಿ ಇಲ್ಲಿಯ ಮಹಾತ್ಮಾ ಗಾಂಧಿ ವಿವಿಯು ತನ್ನ ನ್ಯಾನೋಟೆಕ್ನಾಲಜಿ ಕೇಂದ್ರದ ನಿರ್ದೇಶಕರನ್ನು ವಜಾಗೊಳಿಸಿದೆ
ವಿವಿಯ ಕೆಲವು ಅಧಿಕಾರಿಗಳ ಜಾತಿ ತಾರತಮ್ಯದಿಂದಾಗಿ ತನ್ನ ಪಿಎಚ್‌ಡಿ ಅಧ್ಯಯನವು ವಿಳಂಬಗೊಂಡಿದೆ ಎಂದು ಆರೋಪಿಸಿ ಎಮ್‌ಜಿ ವಿವಿಯ ದಲಿತ ಪಿಎಚ್‌ಡಿ ಅಭ್ಯರ್ಥಿ ದೀಪಾ ಪಿ.ಮೋಹನನ್ ಅವರು ಅ.29ರಿಂದ ಉಪವಾಸ ಮುಷ್ಕರವನ್ನು ನಡೆಸುತ್ತಿದ್ದರು.
ರಾಜ್ಯ ಸರಕಾರದ ಸೂಚನೆಯಂತೆ ನ್ಯಾನೋಟೆಕ್ನಾಲಜಿ ಕೇಂದ್ರದ ನಿರ್ದೇಶಕ ನಂದಕುಮಾರ ಅವರನ್ನು ಹುದ್ದೆಯಿಂದ ತೆರವುಗೊಳಿಸಿಲಾಗಿದೆ ಎಂದು ವಿವಿಯ ಕುಲಪತಿಗಳು ತಿಳಿಸಿದ್ದಾರೆ.
ವಿವಿ ಅಧಿಕಾರಿಗಳು ವಿದ್ಯಾರ್ಥಿನಿಯ ಪರ ನಿಲ್ಲುವುದನ್ನು,ಆಕೆಯ ದೃಷ್ಟಿಕೋನದಿಂದ ವಿಷಯವನ್ನು ಪರಿಶೀಲಿಸುವುದನ್ನು ಮತ್ತು ಆಕೆಯ ಕಳವಳಗಳನ್ನು ನಿವಾರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರವು ಮಧ್ಯಪ್ರವೇಶಿಸಿದೆ ಎಂದು ರವಿವಾರ ಟ್ವೀಟ್ ಮೂಲಕ ತಿಳಿಸಿರುವ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಅವರು,'ಯಾವುದೇ ಸಾಮಾಜಿಕ ಮತ್ತು ತಾಂತ್ರಿಕ ತೊಡಕುಗಳಿಲ್ಲದೆ ತನ್ನ ಸಂಶೋಧನೆಯನ್ನು ಪೂರ್ಣಗೊಳಿಸಲು ದೀಪಾರಿಗೆ ಎಲ್ಲ ಅನುಕೂಲಗಳನ್ನು ಕಲ್ಪಿಸುವ ಭರವಸೆಯನ್ನು ವಿವಿ ನೀಡಿದೆ.
ಗ್ರಂಥಾಲಯ,ಪ್ರಯೋಗಾಲಯ ಮತ್ತು ಹಾಸ್ಟೆಲ್ ಸೇರಿದಂತೆ ಎಲ್ಲ ಅಗತ್ಯ ಮೂಲಸೌಕರ್ಯಗಳನ್ನು ಅವರು ಪಡೆಯಲಿದ್ದಾರೆ. ಸ್ವತಃ ಕುಲಪತಿಗಳೇ ಅವರಿಗೆ ಮಾರ್ಗದರ್ಶಕರಾಗಿರಲಿದ್ದಾರೆ. ದೀಪಾ ಕೂಡ ಈ ಸಲಹೆಗಳಿಗೆ ಮುಕ್ತ ಮನಸ್ಸು ಹೊಂದಿದ್ದಾರೆ. ಇವಿಷ್ಟು ಈವರೆಗೆ ನಮಗೆ ತಿಳಿದುಬಂದಿರುವ ಮಾಹಿತಿಯಾಗಿವೆ 'ಎಂದಿದ್ದಾರೆ.
ವಿದ್ಯಾರ್ಥಿಗಳ ದೂರುಗಳಿಗೆ ಸ್ಪಂದಿಸುವ ವಿಷಯದಲ್ಲಿ ಈ ಹಿಂದೆ ಉಚ್ಚ ನ್ಯಾಯಾಲಯ ಮತ್ತು ಎಸ್‌ಸಿ/ಎಸ್‌ಟಿ ಆಯೋಗ ಮಧ್ಯಪ್ರವೇಶಿಸಿವೆ ಮತ್ತು ವಿವಿಯು ಈ ಮಧ್ಯಪ್ರವೇಶಗಳನ್ನು ಪರಿಗಣಿಸಿ ದೀಪಾ ಅವರ ದೂರನ್ನು ಸಾಧ್ಯವಿದ್ದಷ್ಟು ಶೀಘ್ರ ಬಗೆಹರಿಸಲು ಪ್ರಯತ್ನಿಸಬೇಕು ಎನ್ನುವುದು ಸರಕಾರದ ಅಭಿಪ್ರಾಯವಾಗಿದೆ ಎಂದಿರುವ ಅವರು,'ಆರೋಪಿ ಬೋಧಕರನ್ನು ಹುದ್ದೆಯಿಂದ ವಜಾಗೊಳಿಸಿದ ಬಳಿಕ ದೂರಿನ ವಿಚಾರಣೆಯಲ್ಲಿ ಎದುರಾಗಿರುವ ಅಡಚಣೆಗಳ ಬಗ್ಗೆ ವಿವರಣೆಯನ್ನು ಸಲ್ಲಿಸುವಂತೆ ವಿವಿಗೆ ಸೂಚಿಸಲಾಗಿದೆ.
ಸಮಸ್ಯೆಯು ತಾಂತ್ರಿಕ ಸ್ವರೂಪದ್ದಾಗಿದ್ದರೆ ಅವರು ಅಗತ್ಯ ದಾಖಲೆಯ ಬಗ್ಗೆ ನಮಗೆ ವಿವರಗಳನ್ನು ಸಲ್ಲಿಸಬಹುದು. ವಿದ್ಯಾರ್ಥಿನಿಯ ಆರೋಗ್ಯದ ಬಗ್ಗೆ ಸರಕಾರವು ಆತಂಕಗೊಂಡಿದೆ,ನನಗೂ ವೈಯಕ್ತಿಕವಾಗಿ ಆತಂಕವಾಗಿದೆ. ವಿವಿಯಿಂದ ನಮಗೆ ವಿವರಗಳು ಲಭಿಸಿದ ತಕ್ಷಣ ದೀಪಾರಿಗೆ ನ್ಯಾಯವನ್ನೊದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು 'ಎಂದು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.