ಕೊಚ್ಚಿ: ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರು ಬೇಹುಗಾರಿಕೆ ಪ್ರಕರಣದಲ್ಲಿ ಸಿಬಿಐ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮಾಜಿ ಪೊಲೀಸ್ ಅಧಿಕಾರಿ ಎಸ್. ವಿಜಯನ್ ಆರೋಪಿಸಿದ್ದಾರೆ.
ಕೊಚ್ಚಿ: ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರು ಬೇಹುಗಾರಿಕೆ ಪ್ರಕರಣದಲ್ಲಿ ಸಿಬಿಐ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮಾಜಿ ಪೊಲೀಸ್ ಅಧಿಕಾರಿ ಎಸ್. ವಿಜಯನ್ ಆರೋಪಿಸಿದ್ದಾರೆ.
1994ರ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಜಯನ್ ಸೇರಿದಂತೆ ಕೇರಳದ ಪೊಲೀಸ್ ಮತ್ತು ಗುಪ್ತಚರ ವಿಭಾಗದ 17 ಮಂದಿ ಮಾಜಿ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದು, ನಂಬಿ ನಾರಾಯಣನ್ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ವ್ಯವಹಾರ ನಡೆಸಿದ್ದಾರೆ ಎಂದು ವಿಜಯನ್ ಪರ ವಕೀಲರು ಬುಧವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ನಾರಾಯಣನ್ ಅಥವಾ ಅವರ ಮಗ ತಿರುನಲ್ವೇಲಿ ಜಿಲ್ಲೆಯಲ್ಲಿ ಹಲವು ಎಕರೆಗಳ ಜಮೀನಿನ ಪವರ್ ಆಫ್ ಅಟಾರ್ನಿ ಹೊಂದಿದ್ದಾರೆಂದು ಸಾಬೀತುಪಡಿಸುವ ಸ್ವಾಧೀನ ಪ್ರಮಾಣ ಪತ್ರಗಳನ್ನು ವಿಚಾರಣಾ ನ್ಯಾಯಾಲಯದ ಎದುರು ಸಲ್ಲಿಸಿರುವುದಾಗಿ ವಿಜಯನ್ ಪರ ವಕೀಲರು ಬುಧವಾರ ನ್ಯಾಯಮೂರ್ತಿ ಆರ್. ನಾರಾಯಣ ಪಿಶಾರದಿ ಅವರ ಗಮನಕ್ಕೆ ತಂದರು.
'ಈ ಜಮೀನನ್ನು ಸಿಬಿಐ ಅಧಿಕಾರಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಆರೋಪಿಸಿರುವ ವಿಜಯನ್, ಮಾಜಿ ವಿಜ್ಞಾನಿ ಮತ್ತು ಸಿಬಿಐ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ತನಿಖೆಗೆ ಆದೇಶಿಸಲು ಇಷ್ಟು ದಾಖಲೆಗಳು ಸಾಕಾಗುತ್ತವೆ' ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, 'ಸ್ವಾಧೀನ ಪ್ರಮಾಣ ಪತ್ರ ಭೂಮಿ ಮಾರಾಟವಾಗಿರುವುದಕ್ಕೆ ಆಧಾರವಾಗುವುದಿಲ್ಲ. ಭೂಮಿ ಮಾರಾಟವಾಗಿರುವ ಕುರಿತ ಕ್ರಯಪತ್ರದ ದಾಖಲೆಗಳನ್ನು ಸಲ್ಲಿಸಿ' ಎಂದು ವಿಜಯನ್ ಅವರಿಗೆ ಸೂಚಿಸಿತು.