ಮುಳ್ಳೇರಿಯ: ಕಾಡಾನೆ ದಾಳಿಯಿಂದ ಕಂಗೆಟ್ಟಿರುವ ಪ್ರದೇಶಗಳಲ್ಲಿ ಸಂರಕ್ಷಣೆಗಿರುವ ರಕ್ಷಣಾ ಬೇಲಿ ನಿರ್ಮಾಣದ ಸಮೀಕ್ಷೆ ಆರಂಭವಾಗಿದೆ. ರಾಜ್ಯದಲ್ಲಿ ಪ್ರಾಯೋಗಿಕ ಯೋಜನೆಯಾಗಿ ಅನುಮೋದನೆ ಪಡೆದಿರುವ ಕಾರಡ್ಕ ಕಾಡಾನೆ ಸಂರಕ್ಷಣಾ ಯೋಜನೆಯ (ಕಾಪ್ಪ್) ಭಾಗವಾಗಿ ಸಮೀಕ್ಷೆ ಆರಂಭಿಸಲಾಗಿದೆ. ದೇಲಂಪಾಡಿ ಪಂಚಾಯತ್‍ನ ಪುಲಿಪ್ಪರಂಬಿಲ್‍ನಿಂದ ಸಮೀಕ್ಷೆ ಆರಂಭವಾಗಿದೆ. ಕಾಡಾನೆಗಳ ಹಾವಳಿ ತೀವ್ರವಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ತೂಗು ಬೇಲಿ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ. ಕಾರಡ್ಕ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಐದು ಪಂಚಾಯಿತಿಗಳಲ್ಲಿ ಅರಣ್ಯ ಅತಿಕ್ರಮಣ ಎದುರಿಸುತ್ತಿರುವ ಪ್ರದೇಶಗಳಲ್ಲಿ ಅರಣ್ಯ ಸಂರಕ್ಷಣಾ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ತಲ್ಪಚೇರಿಯಿಂದ ಪುಲಿಪ್ಪರಂಬುವರೆಗೆ 29 ಕಿ.ಮೀ ದೂರದ ವ್ಯಾಪ್ತಿಯಲ್ಲಿ ತೂಗು ಬೇಲಿಯನ್ನು ಸ್ಥಾಪಿಸಲಾಗುವುದು. ಮೊದಲ ಹಂತದಲ್ಲಿ ಸಾಮೆಕೊಚ್ಚಿಯಿಂದ ಬಳ್ಳಕ್ಕಾನದವರೆಗೆ 8 ಕಿ.ಮೀ ದೂರದಲ್ಲಿ ತೂಗು ಬೇಲಿ ನಿರ್ಮಿಸಲಾಗುವುದು. ಯೋಜನೆಯ ನಿರ್ಮಾಣ ಮತ್ತು ನಿರ್ವಹಣೆಗೆ 5 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ.
ಸ್ಥಳೀಯ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಕಾರಡ್ಕ ಬ್ಲಾಕ್ ಪಂಚಾಯತ್ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯದ ವಿವಿಧೆಡೆ ರಕ್ಷಣಾ ಗೋಡೆಗಳನ್ನು ನಿರ್ಮಿಸುವಲ್ಲಿ ಪರಿಣತಿ ಹೊಂದಿರುವ ಕೇರಳ ಪೋಲೀಸ್ ವಸತಿ ಮತ್ತು ನಿರ್ಮಾಣ ನಿಗಮವು ನಿರ್ಮಾಣದ ಹೊಣೆ ಹೊತ್ತಿದೆ. ಕಾರಡ್ಕ ಬ್ಲಾಕ್ ಪಂಚಾಯತ್ ನೇತೃತ್ವದ ಯೋಜನೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಕಾರಡ್ಕ, ದೇಲಂಪಾಡಿ, ಬೇಡಡ್ಕ, ಕುತ್ತಿಕೋಲ್ ಮತ್ತು ಮುಳಿಯಾರ್ ಗ್ರಾಮ ಪಂಚಾಯತ್ ಗಳು ಸಹಭಾಗಿತ್ವ ನೀಡಲಿದೆ. ಜೊತೆಗೆ ಸಂಸದರು ಮತ್ತು ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ ಮತ್ತು ಸರ್ಕಾರದ ನಿಧಿಯನ್ನು ಸಹ ಬಳಸಲಾಗುವುದು. ಈ ಹಿಂದೆ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾಗ ಕಾರಡ್ಕ ಬ್ಲಾಕ್ ಪಂಚಾಯತಿಯು ವಿಶಿಷ್ಟ ಯೋಜನೆ ಕುರಿತು ಪ್ರಸ್ತಾಪಿಸಿತ್ತು. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೂ ಹಣ ಮೀಸಲಿಡುವಂತೆ ಸಚಿವರು ಸೂಚಿಸಿದ್ದರು.
ಡಿಸೆಂಬರ್ ವೇಳೆಗೆ ತೂಗು ಬೇಲಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ತಿಳಿಸಿರುವರು. ಮೊದಲ ಹಂತದಲ್ಲಿ ಮಾರ್ಚ್ ವೇಳೆಗೆ ಎಂಟು ಕಿಲೋಮೀಟರ್ ತೂಗು ಬೇಲಿ ಹಾಕಬಹುದು ಎಂದು ಡಿಎಫ್ ಒ ಪಿ.ಧನೇಶ್ ಕುಮಾರ್ ತಿಳಿಸಿದರು.
ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಹಾಗೂ ದೇಲಂಪಾಡಿ ಪಂಚಾಯತ್ ಅಧ್ಯಕ್ಷ ಎ.ಪಿ ಉಷಾ, ಡಿಎಫ್ ಒ ಪಿ ಧನೇಶ್ ಕುಮಾರ್, ದೇಲಂಪಾಡಿ ಪಂಚಾಯತ್ ಉಪಾಧ್ಯಕ್ಷ ಡಿಎ ಅಬ್ದುಲ್ಲಕುಂಞÂ್ಞ, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಂದ್ರನ್ ಚಾಮಕೊಚ್ಚಿ, ಪಂಚಾಯತ್ ಸದಸ್ಯರು, ಕೇರಳ ಪೋಲೀಸ್ ವಸತಿ ಮತ್ತು ನಿರ್ಮಾಣ ನಿಗಮದ ಇಂಜಿನಿಯರ್ ಪಿ.ಎಂ.ಹಂಸ, ಕಾಸರಗೋಡು ರೇಂಜ್ ಅಧಿಕಾರಿ ಟಿ.ಜಿ.ಸೊಲೊಮನ್, ವಲಯ ಅರಣ್ಯಾಧಿಕಾರಿಗಳು, ಆರ್‍ಆರ್‍ಟಿ ತಂಡದ ಸದಸ್ಯರು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.